ಅಯೋಧ್ಯೆ: ಪ್ರಭು ಶ್ರೀರಾಮರು ನಮ್ಮ ಪೂರ್ವಜರಾಗಿದ್ದು, ನಾವು ಮುಸ್ಲಿಮರಾಗಿದ್ದರು ಶ್ರೀರಾಮರನ್ನು ಪೂಜಿಸುತ್ತೇವೆ. ಹೀಗಾಗಿ ಅವರ ದರ್ಶನಕ್ಕಾಗಿ ಬಂದಿದ್ದೇವೆ ಎಂದು ಲಕ್ನೋದಿಂದ (Lucknow) ಅಯೋಧ್ಯೆಗೆ ಕಾಲ್ನಡಿಗೆಯಲ್ಲಿ ಬಂದಿರುವ 350 ಜನರ ಮುಸ್ಲಿಂ ಭಕ್ತರನ್ನೊಳಗೊಂಡಿರುವ ತಂಡ ಹೇಳಿದೆ.
350 ಜನರ ಮುಸ್ಲಿಂ ಭಕ್ತರು ಉತ್ತರಪ್ರದೇಶದ ಲಕ್ನೋದಿಂದ 6 ದಿನಗಳ ಕಾಲ ಪಾದಯಾತ್ರೆಯ ಮೂಲಕ ಅಯೋಧ್ಯೆಗೆ ತೆರಳಿ ರಾಮಲಲ್ಲಾನ ದರ್ಶನ ಪಡೆದುಕೊಂಡು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮುಸ್ಲಿಂ ಸಂಘಟನೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ ನೇತೃತ್ವದ ಈ ತಂಡವು ಜನವರಿ (January 25) ರಂದು ಲಕ್ನೋದಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿತ್ತು ಎಂದು ಸ್ಥಳೀಯ ಮಾದ್ಯಮಗಳು ವರದಿ ಮಾಡಿವೆ.
ಮೂಲಗಳ ಪ್ರಕಾರ, 350 ಜನರ ಮುಸ್ಲಿಂ ಭಕ್ತರ ಗುಂಪು ‘ಜೈ ಶ್ರೀ ರಾಮ್ʼ ʼಜಯ ಜಯ ಶ್ರೀರಾಮ’ ʼಜೈ ಸಿಯಾ ರಾಮ್ʼ ʼಭಾರತ್ ಮಾತಾಕೀ ಜೈʼ ಎಂಬ ಘೋಷಣೆ ಕೂಗುತ್ತಾ ಸುಮಾರು 150 ಕಿ.ಮೀ ಕಾಲ್ನಡಿಗೆಯಲ್ಲಿ ತೆರಳಿ ಅಯೋಧ್ಯೆಗೆ ತಲುಪಿದ್ದಾರೆ.
ಅಯೋಧ್ಯೆಯ ರಾಮಲಲ್ಲಾನ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಸ್ಲಿಂ ಮುಖಂಡ ರಾಜಾ ರಯೀಸ್ ಮತ್ತು ಗುಂಪಿನ ನೇತೃತ್ವ ವಹಿಸಿದ್ದ ಪ್ರಾಂತೀಯ ಸಂಯೋಜಕ ಶೇರ್ ಅಲಿ ಖಾನ್ (Sher Ali Khan) ಅವರು, ಭಗವಾನ್ ಪ್ರಭು ಶ್ರೀರಾಮನು ಭಾರತದಲ್ಲಿ ಇರುವ ಎಲ್ಲರಿಗೂ ಪೂರ್ವಜರಾಗಿದ್ದಾರೆ. ಯಾವುದೇ ಧರ್ಮವು ಇತರರಿಗೆ ಟೀಕೆ, ಅಪಹಾಸ್ಯ ಅಥವಾ ತಿರಸ್ಕಾರವನ್ನು ಕಲಿಸುವುದಿಲ್ಲ. ಈ ಕಾರ್ಯವು ಏಕತೆ, ಸಮಗ್ರತೆ, ಸಾರ್ವಭೌಮತೆ ಮತ್ತು ಸಾಮರಸ್ಯದ ಸಂದೇಶವನ್ನು ರವಾನಿಸುತ್ತದೆ.
ನಾವು ಪ್ರಭು ಶ್ರೀರಾಮರ ಬದುಕಿನ ಆದರ್ಶಗಳನ್ನು ನಂಬಿದ್ದೇವೆ. ಅವರ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಏಕತೆ ಹಾಗೂ ಸಾಮರಸ್ಯವನ್ನು ಅವರು ಸಾರಿದ್ದಾರೆ ಎಂದು ಸಯೀದ್ ಹೇಳಿದರು.