ತಮ್ಮ ಪುಟ್ಟ ಮಗಳು ಕಳೆದ 9 ವರ್ಷಗಳಿಂದ ಕಾಣೆಯಾಗಿದ್ದಳು, ಆಕೆಯ ಬರುವಿಕೆಗಾಗಿ ಕಾಯುತ್ತ ತಂದೆ ತಾಯಿಯ ಕಣ್ಣೀರೇ ಬತ್ತಿ ಹೋಗಿದ್ದವು, ಅಷ್ಟೇ ಯಾಕೆ ಮಗಳ ಬರುವುಕೆಯ ನಿರೀಕ್ಷೆಯಲ್ಲೇ ತಂದೆಯೂ ಇಹಲೋಕ ತ್ಯಜಿಸಿದರು. ಇದೀಗ 9 ವರ್ಷಗಳ ಬಳಿಕ ಮಗಳು ಏಕಾಏಕಿ ಪ್ರತ್ಯಕ್ಷಳಾಗಿ ಮನೆಗೆ ಮರಳಿದ್ದನ್ನ ಕಂಡು ಕುಟುಂಬದ ಖುಷಿಗೆ ಪಾರವೇ ಇಲ್ಲದಂತಾಗಿದೆ.
ಕಾಣೆಯಾದ ಮಕ್ಕಳ ಹುಡುಕಾಟದ ಜವಾಬ್ದಾರಿಯನ್ನು ಮುಂಬೈನ ಪೊಲೀಸ್ ಅಧಿಕಾರಿಯೊಬ್ಬರಿಗೆ ವಹಿಸಲಾಯಿತು. ಆ ಅಧಿಕಾರಿ ತನ್ನ ಕೆಲಸದ ಅವಧಿಯಲ್ಲಿ ಕಾಣೆಯಾದ 165 ಮಕ್ಕಳನ್ನು ಪತ್ತೆಹಚ್ಚಿದ್ದರು. ಆದರೆ ಕೇಸ್ ನಂಬರ್ 166 ಎಂತಹ ಪ್ರಕರಣವಾಗಿತ್ತೆಂದರೆ ಆ ಕೇಸ್‌ನ್ನ ಭೇದಿಸಲು ಅಧಿಕಾರಿಗೆ ಸಾಧ್ಯವಾಗಲಿಲ್ಲ. ಏಕೆಂದರೆ ಅದಕ್ಕೂ ಮುನ್ನವೇ ಆ ಅಧಿಕಾರಿ ನಿವೃತ್ತರಾಗಿದ್ದರು. ಆದರೂ ಪೊಲೀಸರು ಕೇಸ್ ನಂಬರ್ 166 ಭೇದಿಸಲು ಪ್ರಯತ್ನಿಸುತ್ತಲೇ ಇದ್ದರು. ಈ ಪ್ರಕರಣವು 2013 ರಲ್ಲಿ ಅಪಹರಣಕ್ಕೊಳಗಾದ 7 ವರ್ಷದ ಬಾಲಕಿಗೆ ಸಂಬಂಧಿಸಿದೆ ಆದರೆ 2022 ರಲ್ಲಿ ಪವಾಡ ಸಂಭವಿಸಿತು.
ಮುಂಬೈನ ಅಂಧೇರಿ ಪಶ್ಚಿಮದ ಗರ್ಲ್ಬರ್ಟ್ ಹಿಲ್ ಪ್ರದೇಶದಲ್ಲಿ, ಆ ದೇವರು ಒಂದೇ ಕ್ಷಣದಲ್ಲಿ 9 ವರ್ಷಗಳಿಂದ ಚಿಕ್ಕ ಮಗಳು ಮನೆಯಿಂದ ಕಾಣೆಯಾಗಿದ್ದ ಮನೆಯ ಕುಟುಂಬದ ಸಂತೋಷವನ್ನು ಮತ್ತೆ ಹಿಂದಿರುಗಿಸಿದನು. ಯಾವ ಮಗಳಿಗಾಗಿ ತಾಯಿಯ ಕಣ್ಣುಗಳು ಕಾಯುತ್ತಿದ್ದವೋ ಮತ್ತು ಯಾವ ಮಗಳು ಕಾಣೆಯಾದ ದುಃಖದಲ್ಲಿ ತಂದೆ ಇಹಲೋಕ ತ್ಯಜಿಸಿದ್ದರೋ, ಆ ಮನೆಯ ಮಗಳು ತುಂಬಾ ವರ್ಷಗಳ ನಂತರ ಇದ್ದಕ್ಕಿದ್ದಂತೆ ತನ್ನ ಮನೆಗೆ ಮರಳಿದಾಗ ಕುಟುಂಬಸ್ಥರ ಖುಷಿಗೆ ಪಾರವೇ ಇಲ್ಲದಂತಾಗಿತ್ತು. ಹೌದು ಸದ್ಯ ಗೌಡ್ ಕುಟುಂಬದಲ್ಲಿ ಇದೇ ರೀತಿ ನಡೆದಿದೆ. ಮಗಳು ಮನೆಗೆ ಬಂದ ಕೂಡಲೇ ಈ ಕುಟುಂಬವು ಕೆಲವೊಮ್ಮೆ ತಮ್ಮ ಮಗಳನ್ನು ತಬ್ಬಿಕೊಂಡು ಮುದ್ದಾಡಿದರೆ ಕೆಲವೊಮ್ಮೆ ಅವರ ಕಣ್ಣುಗಳಿಂದ ಆನಂದ ಬಾಷ್ಪ ಸುರಿಯುತ್ತಲೇ ಇತ್ತು.
ಮಗಳು ಕಾಣೆಯಾಗಿದ್ದ ಕೊರಗಿನಲ್ಲೇ ಇಹಲೋಕ ತ್ಯಜಿಸಿದ್ದ ತಂದೆ
ಇಷ್ಟೆಲ್ಲಾ ಖುಷಿಯ ನಡುವೆಯೂ ಏನಾದರೂ ಕೊರತೆಯಿದ್ದರೆ ಅದು ಈ ಕುಟುಂಬದ ಯಜಮಾನನ ಅಂದರೆ ಬಾಲ್ಯದಲ್ಲಿ ಕಾಣೆಯಾಗಿದ್ದ ಪೂಜಾಳ ತಂದೆಯ ಅಗಲಿಕೆ. ಕುಟುಂಬಸ್ಥರ ಪ್ರಕಾರ, ಪೂಜಾ ನಾಪತ್ತೆಯಾದ ದುಃಖದಲ್ಲಿ ಆಕೆಯ ತಂದೆ ಸಂತೋಷ್ ಗೌಡ್ ಸರಿಯಾಗಿ ಊಟ-ತಿಂಡಿ ಮಾಡುವುದನ್ನು ಬಿಟ್ಟಿದ್ದರು. ನಂತರ ಅವರು ಆಲ್ಕೋಹಾಲ್ ಮತ್ತು ಇತರ ರೀತಿಯ ಡ್ರಗ್ಸ್ನಲ್ಲಿ ಮುಳುಗಿದರು, ಅವರು ಕ್ಯಾನ್ಸರ್ನಂತಹ ಮಾರಕ ಕಾಯಿಲೆಯಿಂದ ಬಾಧಿತರಾದರು ಮತ್ತು ಅಂತಿಮವಾಗಿ ಈ ರೋಗವು ಅವನ ಜೀವವನ್ನೇ ಬಲಿ ಪಡೆಯಿತು. ತಂಗಿ ಮನೆಗೆ ಮರಳಿದ ಮೇಲೆ ಸಂತೋಷ್ ಗೌಡ್ ಅವರ ಮಗ ಅಂದರೆ ಪೂಜಾಳ ಅಣ್ಣನಿಗೆ ತುಂಬಾ ಖುಷಿ ಆದರೆ ಈಗ ತನ್ನ ತಂದೆ ಪೂಜಾಳನ್ನು ನೋಡಲು ಮನೆಯಲ್ಲಿಲ್ಲವಲ್ಲ ಎಂಬುದೇ ಅವರ ಕೊರಗು.
ಸಮಯವು ಪ್ರತಿಯೊಂದು ಗಾಯವನ್ನು ಗುಣಪಡಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಮಗಳನ್ನು ಕಳೆದುಕೊಂಡ ಗೌಡ್ ಕುಟುಂಬದ ಗಾಯ ವಾಸಿಯಾಗಿರಲಿಲ್ಲ ಎಂಬುದು ಸತ್ಯ. ಇಡೀ ಒಂಬತ್ತು ವರ್ಷಗಳ ಕಾಲ ತನ್ನ ಮಗಳನ್ನು ಹುಡುಕುತ್ತಲೇ ಇತ್ತು. ಗೌಡ್ ಕುಟುಂಬವು ತಮ್ಮ ಮಗಳಿಗಾಗಿ ಬೀದಿ ಬೀದಿ ಅಲೆಯುತ್ತಲೇ ಇದ್ದರ ಮತ್ತು ಬಹುಶಃ ಅವರ ಭರವಸೆಗಳು ಮುರಿಯುವ ಹಂತದಲ್ಲಿದ್ದಾಗ, ಇದ್ದಕ್ಕಿದ್ದಂತೆ ಒಂದು ದಿನ ಪವಾಡ ಸಂಭವಿಸಿತು. ಪೂಜಾ ಕಣ್ಮರೆಯಾದ ಕಥೆ ಎಷ್ಟು ನೋವಿನಿಂದ ಕೂಡಿದೆಯೋ, ಆಕೆಯ ವಾಪಸ್ ಬಂದ ಕಥೆಯೂ ಅಷ್ಟೇ ಬೆರಗು ಹುಟ್ಟಿಸುವಂತಿದೆ. ಅದನ್ನು ತಿಳಿದರೆ ನೀವೆಲ್ಲರೂ ದಿಗ್ಭ್ರಮೆಗೊಳ್ಳುತ್ತೀರಿ.
ಐಸ್‌ಕ್ರೀಂ ನೆಪದಲ್ಲಿ ಅಪಹರಣ
ಅದು ಸುಮಾರು 2013 ರ ವರ್ಷ. 7 ವರ್ಷದ ಪೂಜಾ ತನ್ನ ಸಹೋದರನೊಂದಿಗೆ ಬೆಳಗ್ಗೆ ಶಾಲೆಗೆ ಹೊರಟಿದ್ದಾಗ ದಾರಿಯಲ್ಲಿ ಐಸ್ ಕ್ರೀಂ ಹಣದ ವಿಚಾರವಾಗಿ ಅಣ್ಣನ ಜೊತೆ ಜಗಳವಾಡಿದಳು. ಆಗ ಅವಳು ತನ್ನ ಸಹೋದರನಿಂದ ದೂರ ಸರಿದು ನಡೆಯಲರಾಂಭಿಸದಳು. ಆಗ ಆ ಹುಡುಗಿಯನ್ನು ಅಪಹರಿಸುವ ಉದ್ದೇಶದಿಂದ ಅಲ್ಲಿ ಸುತ್ತಾಡುತ್ತಿದ್ದ ದಂಪತಿಗಳು ಈ ಅವಕಾಶವನ್ನು ಬಳಸಿಕೊಂಡರು. ಐಸ್ ಕ್ರೀಮ್ ಕೊಡಿಸುವ ನೆಪದಲ್ಲಿ ಪೂಜಾಳನ್ನು ತನ್ನ ಬಳಿಗೆ ಕರೆಸಿ ಅಪಹರಿಸಿದ್ದರು. ನಂತರ ಅವರು ಪೂಜಾಳನ್ನ ಕರೆದುಕೊಂಡು ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣಿಸಿದ್ದರು. ದಂಪತಿಗೆ ಮಕ್ಕಳಿರಲಿಲ್ಲ ಹಾಗಾಗಿ ಅವರು ಪೂಜಾಳನ್ನ ತಮ್ಮ ಮಗಳಾಗಿ ಬೆಳೆಸಲು ಬಯಸಿದ್ದರು.
ಪೂಜಾಳಿಂದಲೇ ಮನೆಯ ಎಲ್ಲ ಕೆಲಸಗಳನ್ನ ಮಾಡಿಸುತ್ತಿದ್ದ ದಂಪತಿ
ಮಕ್ಕಳಿಲ್ಲ ಎಂಬ ಕಾರಣಕ್ಕೆ ಪೂಜಾಳನ್ನು ಅಪಹರಿಸಲಾಯಿತು ಆದರೆ ಶೀಘ್ರದಲ್ಲೇ ದಂಪತಿಗಳು ಪೂಜಾಳನ್ನು ಖರೀದಿಸಿದ ಗುಲಾಮನಂತೆ ಪರಿಗಣಿಸಲು ಪ್ರಾರಂಭಿಸಿದರು. ಅವರು ಆಕೆಯಿಂದಲೇ ಮನೆಯ ಎಲ್ಲಾ ಕೆಲಸಗಳನ್ನೂ ಮಾಡಲು ಪ್ರಾರಂಭಿಸಿದರು, ಆಕೆಯನ್ನ ಹೊಡೆಯಲಾರಂಭಿಸಿದರು, ಜನರನ್ನು ಭೇಟಿಯಾಗುವುದನ್ನು ಮತ್ತು ಹೊರಗೆ ಹೋಗುವುದನ್ನು ಸಹ ನಿಷೇಧಿಸಿದರು.
ಪೂಜಾ ಜೊತೆ ಮನೆಕೆಲಸದವಳಂತೆ ವ್ಯವಹಾರ
ಈ ರೀತಿ ಪೂಜಾ ತನ್ನ ಹೊಸ ಪೋಷಕರೊಂದಿಗೆ ಪ್ರತಿದಿನ ಉಸಿರುಗಟ್ಟಿಸಿಕೊಂಡು ಬದುಕುತ್ತಿದ್ದಳು. ಚಿತ್ರಹಿಂಸೆ ಮುಂದುವರೆಯಿತು, ಆದರೆ ದಂಪತಿಗಳಿಗೆ ಮಗು ಜನಿಸಿದಾಗ ಪೂಜಾಳ ದುಃಖಗಳು ಮತ್ತು ಕಷ್ಟಗಳು ಮತ್ತಷ್ಟು ಹೆಚ್ಚಾದವು. ಇದೀಗ ಪೂಜಾ ಜೊತೆಗಿನ ಹೊಸ ಪೋಷಕರ ವರ್ತನೆ ಮತ್ತಷ್ಟು ಅಸಭ್ಯವಾದವು. ಜಗಳವಾಡುವುದು ಮತ್ತು ನಿಂದಿಸುವುದು ದಿನನಿತ್ಯದ ವಿಷಯವಾಯಿತು. ಈಗ ಇಬ್ಬರೂ ತಮ್ಮ ಮಗುವಿನ ಮೇಲೆ ತಮ್ಮ ಪ್ರೀತಿಯನ್ನು ವ್ಯಯಿಸಲು ಪ್ರಾರಂಭಿಸಿದರು ಮತ್ತು ಎಲ್ಲಾ ಮಾನವೀಯತೆಯ ತತ್ವಗಳನ್ನು ಬದಿಗಿಟ್ಟು, ಪೂಜಾಳನ್ನ ಖರೀದಿಸಿದ ಗುಲಾಮನಂತೆ ಪರಿಗಣಿಸಲು ಪ್ರಾರಂಭಿಸಿದರು.
ಮುಂಬೈನ DN ನಗರ್ ಠಾಣೆಯಲ್ಲಿ ದಾಖಲಾಗಿದ್ದ ಕೇಸ್
ಇತ್ತ ಪೂಜಾಳನ್ನು ಹುಡುಕಿಕೊಂಡು ಅನೇಕ ಜನ ನಾನಾ ರೀತಿಯ ಅಭಿಯಾನ ನಡೆಸುತ್ತಿದ್ದರು. ಮುಂಬೈ ಪೊಲೀಸರಿಂದಲೂ ಅಭಿಯಾನ ನಡೆಸಲಾಗುತ್ತಿದೆ. ವಿವಿಧ ಸಾಮಾಜಿಕ ಸಂಘಟನೆಗಳು ಮತ್ತು ಸ್ವಯಂಸೇವಕರು ಪೂಜಾಗಾಗಿ ಹುಡುಕಾಟ ನಡೆಸುತ್ತಿದ್ದರು. ವಾಸ್ತವವಾಗಿ, 2013 ರಲ್ಲಿ, ಪೂಜಾ ನಾಪತ್ತೆಯಾದ ನಂತರ, ಆಕೆಯ ಕುಟುಂಬ ಸದಸ್ಯರು ಮುಂಬೈನ ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ಆಕೆಯ ಅಪಹರಣದ ದೂರನ್ನ ಸಲ್ಲಿಸಿದ್ದರು. ಬಳಿಕ ಪೊಲೀಸರು ಆಕೆಯ ಹುಡುಕಾಟ ಆರಂಭಿಸಿದ್ದರು. ನಂತರ ಡಿಎನ್ ನಗರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ರಾಜೇಂದ್ರ ಧೋಂಡು ಭೋಂಸ್ಲೆ ಅವರಿಗೆ ಪೂಜಾಳನ್ನ ಪತ್ತೆ ಹಚ್ಚುವ ಜವಾಬ್ದಾರಿಯನ್ನು ನೀಡಲಾಯಿತು. ಅಂದರೆ, ಅವರು ಈ ಪ್ರಕರಣದ ಐಒ ಅಂದರೆ ತನಿಖಾ ಅಧಿಕಾರಿಯಾಗಿದ್ದರು.
ಪೂಜಾಳ ಹುಡುಕಾಟದಲ್ಲಿ ನಿರತರಾಗಿದ್ದ ಸಬ್ ಎಎಸ್ಐ ರಾಜೇಂದ್ರ
ಇದಕ್ಕೂ ಮುನ್ನ ತಮ್ಮ ವೃತ್ತಿ ಜೀವನದಲ್ಲಿ 165 ಹುಡುಗಿಯರ ನಾಪತ್ತೆ ಪ್ರಕರಣಗಳನ್ನು ರಾಜೇಂದ್ರ ಅವರು ಭೇದಿಸಿದ್ದರು, ಆದರೆ ಸಾಕಷ್ಟು ಪ್ರಯತ್ನ ಪಟ್ಟರೂ ಪೂಜಾಳ ನಾಪತ್ತೆ ಪ್ರಕರಣವನ್ನು ಅಂದರೆ ಕೇಸ್ ನಂಬರ್ 166 ಅನ್ನು ಭೇದಿಸಲು ಅವರಿಗೆ ಸಾಧ್ಯವಾಗಲಿಲ್ಲ. ಎಎಸ್‌ಐ ಧೋಂಡು ಅವರ ಕೆಲಸದ ಮೇಲಿನ ಶೃದ್ಧೆಯನ್ನ ನೋಡಿ, ಅವರ ನಿವೃತ್ತಿಯ ನಂತರವೂ ಅವರು ಪೂಜಾಳನ್ನ ಹುಡುಕಲು ಪ್ರಯತ್ನಿಸುತ್ತಿದ್ದರು. ಮುಗ್ಧ ಪೂಜಾಳ ಚಿತ್ರವನ್ನು ತನ್ನ ಬಳಿ ಇಟ್ಟುಕೊಂಡು ಆಕೆಯ ಕುಟುಂಬ ಸದಸ್ಯರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಇದು ಮುಂಬೈ ಪೊಲೀಸರ ಪ್ರಯತ್ನವಾದರೆ, ಅನೇಕ ಸಂಘ ಸಂಸ್ಥೆಗಳು ಮತ್ತು ಸ್ವಯಂಸೇವಕರೂ ಪೂಜಾಳನ್ನ ಹುಡುಕುತ್ತಿದ್ದರು.
ಬೇರೆಯವರ ಮನೆಗಳಲ್ಲೂ ಪೂಜಾಳಿಂದ ಕೆಲಸ ಮಾಡಿಸುತ್ತಿದ್ದರು
ಮತ್ತೊಂದೆಡೆ, 9 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪೂಜಾ, ಈ ದಿನಗಳಲ್ಲಿ ಅಂಧೇರಿಯ ದಂಗದ್ವಾಡಿ ಪ್ರದೇಶದಲ್ಲಿ ತನ್ನ ಅಪಹರಣಕಾರ ಪೋಷಕರೊಂದಿಗೆ ವಾಸಿಸುತ್ತಿದ್ದಳು. ಪೂಜಾ ಅಪಹರಣವಾಗಿ ಹಲವು ವರ್ಷಗಳು ಕಳೆದಿದ್ದರಿಂದ ಆಕೆಯನ್ನು ಅಪಹರಿಸಿದ ದಂಪತಿಗಳು ಪೂಜಾ ತನ್ನ ಹಳೆಯ ಜೀವನವನ್ನು ಮರೆತಿದ್ದಾಳೆ ಮತ್ತು ಆಕೆ ತಮ್ಮ ಮನೆಯಿಂದ ಓಡಿಹೋಗುವ ಸಾಧ್ಯತೆಯಿಲ್ಲ ಎಂದುಕೊಂಡಿದ್ದರು. ಆದ್ದರಿಂದ ಅವರು ಪೂಜಾಳನ್ನು ಬೇರೆಯವರ ಮನೆಗೆ ಕೆಲಸಕ್ಕೂ ಕಳುಹಿಸಲಾರಂಭಿಸಿದರು. ಆಕೆ ದೀರ್ಘಕಾಲದವರೆಗೆ ವಿವಿಧ ಮನೆಗಳಲ್ಲಿ ಕೆಲಸ ಮಾಡುತ್ತಿದ್ದಳು ಮತ್ತು ಈ ಸಂಚಿಕೆಯಲ್ಲಿ ಆಕೆ ಸುಮಾರು 7 ತಿಂಗಳ ಕಾಲ ಮನೆಯಲ್ಲಿ ಬೆಬಿ ಸಿಟ್ಟಿಂಗ್ ಕೆಲಸವನ್ನೂ ಮಾಡುತ್ತಿದ್ದಳು.
Google ಸರ್ಚ್ ನಲ್ಲಿ ಸಿಕ್ಕಿತು ಸ್ವಯಂಸೇವಕರ ನಂಬರ್
ಅಲ್ಲಿ ಅವಳು ತನ್ನೊಂದಿಗೆ ಕೆಲಸ ಮಾಡುವ ಇನ್ನೊಬ್ಬ ಹುಡುಗಿಯನ್ನು ಭೇಟಿಯಾದಳು, ಅವಳಿಗೆ ಪೂಜಾ ತನ್ನ ಜೀವನದ ನೈಜ ಕಥೆಯನ್ನು ವಿವರಿಸಿದಳು ಮತ್ತು ಇದು ಅವಳ ಜೀವನದ ದೊಡ್ಡ ತಿರುವು ಎಂದು ಸಾಬೀತಾಯಿತು. ಪೂಜಾಳೊಂದಿಗೆ ಕೆಲಸ ಮಾಡುವ ಹುಡುಗಿ ಪೂಜಾ ಬಗ್ಗೆ ಮಾಹಿತಿ ಸಂಗ್ರಹಿಸಲು ಆಕೆಯ ಕುಟುಂಬದ ಸದಸ್ಯರ ವಿಳಾಸವನ್ನು ಹುಡುಕತೊಡಗಿದಳು. ಆಕೆ ಪೂಜಾ ಮತ್ತು ಅವರ ಕುಟುಂಬ ಸದಸ್ಯರ ಬಗ್ಗೆ ಗೂಗಲ್‌ನಲ್ಲಿ ಹುಡುಕಲು ಪ್ರಾರಂಭಿಸಿದಳು ಮತ್ತು ಈ ಪ್ರಯತ್ನದಲ್ಲಿ ಒಂದು ಪವಾಡ ಸಂಭವಿಸಿತು. ವಾಸ್ತವವಾಗಿ ಇಲ್ಲಿಯವರೆಗೆ ಪೂಜಾಳನ್ನು ಹುಡುಕಲು ಇಂಟರ್ನೆಟ್‌ನಲ್ಲಿ ಸಾಕಷ್ಟು ಮಾಹಿತಿಯನ್ನ ಅಪ್‌ಲೋಡ್ ಮಾಡಲಾಗಿತ್ತು ಮತ್ತು ಆ ಹುಡುಗಿ ಪೂಜಾ ಅವರ ಕುಟುಂಬ ಸದಸ್ಯರ ಬಗ್ಗೆ ಹುಡುಕಿದಾಗ, ಪೂಜಾಗಾಗಿ ಹುಡುಕುತ್ತಿರುವ ಕೆಲವು ಸ್ವಯಂಸೇವಕರ ನಂಬರ್ ಗಳು ಆಕೆಗೆ ಸಿಕ್ಕಿತು.
ಮತ್ತಿನ್ನೇನು, ಪೂಜಾಳ ಮನೆಯ ಬಳಿಯೇ ನೆಲೆಸಿರುವ ಸಮಾಜ ಸೇವಕ ಮೊಹಮ್ಮದ್ ರಫೀಕ್ ಗೆ ಹುಡುಗಿ ಕರೆ ಮಾಡಿದ್ದಳು. ಪೂಜಾಳ ಶೋಧ ಕಾರ್ಯಾಚರಣೆಯನ್ನು ರಫೀಕ್ ಖಚಿತಪಡಿಸಿದಾಗ, ಆ ಹುಡುಗಿ ರಫೀಕ್‌ರನ್ನು ಪೂಜಾಳೊಂದಿಗೆ ವೀಡಿಯೊ ಕಾಲ್ ನಲ್ಲಿ ಮಾತನಾಡುವಂತೆ ಮಾಡಿದ್ದಾಳೆ. ರಫೀಕ್, ಸಮಯ ಪ್ರಜ್ಞೆ ತೋರಿಸುತ್ತಾ, ವೀಡಿಯೊ ಕಾಲ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಂಡು ನೇರವಾಗಿ ಆ ಚಿತ್ರವನ್ನು ಪೂಜಾ ತಾಯಿಗೆ ತೋರಿಸಿದನು. ಆಕೆಯ ಚಿತ್ರ ನೋಡಿದ ತಕ್ಷಣ ಮಗಳನ್ನು ಗುರುತಿಸಿ ಅಳಲು ಪ್ರಾರಂಭಿಸಿದರು.
ಆರೋಪಿ ಡಿಸೋಜಾ ದಂಪತಿಗಳು ಅರೆಸ್ಟ್
ಇದೀಗ ಪೂಜಾಳ ಕುಟುಂಬ ಸದಸ್ಯರು, ಸಾಮಾಜಿಕ ಕಾರ್ಯಕರ್ತ ರಫೀಕ್ ಮತ್ತು ಹತ್ತಿರದ ಪ್ರದೇಶಗಳ ಜನರೊಂದಿಗೆ ಮತ್ತೆ ಅದೇ ಡಿಎನ್ ನಗರ ಪೊಲೀಸ್ ಠಾಣೆಗೆ ತಲುಪಿದರು, ಅಲ್ಲಿ ಸುಮಾರು ಒಂಬತ್ತು ವರ್ಷಗಳ ಹಿಂದೆ ಪೂಜಾ ಕಾಣೆಯಾದ ಕಂಪ್ಲೇಂಟ್ ದಾಖಲಿಸಲಾಗಿತ್ತು. ಕುಟುಂಬಸ್ಥರು ಪೊಲೀಸರಿಗೆ ಸಂಪೂರ್ಣ ವಿಷಯ ತಿಳಿಸಿದ್ದಾರೆ. ಈಗಾಗಲೇ ಪೂಜಾಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರು ಅದೇ ದಿನ ಆ ಪ್ರದೇಶದಲ್ಲಿ ಅಂದರೆ ಅಂಧೇರಿಯ ದಂಗದ್ವಾಡಿಯ ವಸತಿ ಪ್ರದೇಶದಲ್ಲಿ ದಾಳಿ ನಡೆಸಿ 16 ವರ್ಷದ ಪೂಜಾಳನ್ನು ವಶಪಡಿಸಿಕೊಂಡರು. ಇದರೊಂದಿಗೆ ಆಕೆಯನ್ನ ಅಪಹರಿಸಿದ ದಂಪತಿ, ಹ್ಯಾರಿ ಜೋಸೆಫ್ ಡಿಸೋಜಾ ಮತ್ತು ಆತನ ಪತ್ನಿ ಸೋನಿಕ್‌ಳನ್ನೂ ಕೂಡ ಪೊಲೀಸರು ಬಂಧಿಸಿದ್ದಾರೆ. ತಮ್ಮ ಸುಖಕ್ಕಾಗಿ ಪರರ ಬದುಕಿನಲ್ಲಿ ಅಂಧಕಾರ ಸೃಷ್ಟಿಸುತ್ತಿದ್ದ ಈ ಜೋಡಿ ಇದೀಗ ಕಂಬಿ ಎಣಿಸುತ್ತಿದ್ದಾರೆ.