ಅಯೋಧ್ಯೆಯಯ ಗರ್ಭಗುಡಿಯಲ್ಲಿ ಇರುವ ರಾಮಲಲ್ಲಾ ವಿಗ್ರಹವನ್ನು ಕೆತ್ತಿದ್ದು ಕರ್ನಾಟಕದ ಅರುಣ್ ಯೋಗಿರಾಜ್. ಹಲವಾರು ತಿಂಗಳ ಕಾಲ ವಿಗ್ರಹದ ಜೊತೆಗೇ ಬದುಕಿದ್ದ ಅರುಣ್ ಯೋಗಿರಾಜ್ ಅವರಿಗೆ ಪ್ರಾಣಪ್ರತಿಷ್ಠಾಪನೆಯ ಬಳಿಕ ವಿಗ್ರಹಕ್ಕೆ ಬಂದ ಜೀವಕಳೆಯನ್ನು ಕಂಡು ಈ ವಿಗ್ರಹವನ್ನ ನಾನೇ ಕೆತ್ತಿದ್ದಾ? ಅಂತ ಅಚ್ಚರಿಗೊಂಡಿದ್ದಾರೆ.
ಅಯೋಧ್ಯೆ: ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಬಳಿಕ ಅಯೋಧ್ಯೆಯ ಗರ್ಭಗುಡಿಯಲ್ಲಿರುವ ಬಾಲಕರಾಮನ ವಿಗ್ರಹ ಜೀವಕಳೆ ಪಡೆದುಕೊಂಡಿದೆಯೇ? ಇದನ್ನು ಹೌದು ಎನ್ನುತ್ತಾರೆ ವಿಗ್ರಹದ ಶಿಲ್ಪಿ ಅರುಣ್ ಯೋಗಿರಾಜ್. ಅಂದಾಜು 7 ತಿಂಗಳ ಕಾಲ ತಮ್ಮ ಕುಟುಂಬವನ್ನು ತೊರೆದು ವಿಗ್ರಹ ನಿರ್ಮಾಣ ಕಾರ್ಯದಲ್ಲಿದ್ದ ಅರುಣ್ ಯೋಗಿರಾಜ್, ಕೃಷ್ಣಶಿಲೆಯನ್ನು ರಾಮಲಲ್ಲಾ ಆಗಿ ರೂಪು ಮಾಡುವ ಪ್ರತಿ ಹಂತವನ್ನೂ ಆನಂದಿಸಿದ್ದಾರೆ. ಹಾಗಾಗಿ ವಿಗ್ರಹದ ಇಂಚಿಂಚೂ ಬಲ್ಲ ಅರುಣ್ ಯೋಗಿರಾಜ್ಗೆ ಗರ್ಭಗುಡಿಯಲ್ಲಿ ಅದೇ ವಿಗ್ರಹ ಪ್ರತಿಷ್ಠಾಪನೆಯಾಗಿ ಪ್ರಾಣ ಪ್ರತಿಷ್ಠಾಪನೆ ನಡೆದ ಬಳಿಕ ಆದ ಬದಲಾವಣೆ ಕಂಡು ಅಚ್ಚರಿಪಟ್ಟಿದ್ದಾರೆ. ವಿಗ್ರಹ ನಿರ್ಮಾಣ ಮಾಡುವ ಸಮಯದಲ್ಲಿ ಬೇರೆ ರೀತಿಯಲ್ಲಿ ಕಾಣುತ್ತಿತ್ತು. ಆದರೆ, ಪ್ರಾಣ ಪ್ರತಿಷ್ಠಾಪನೆ ಆದ ಬಳಿಕ ವಿಇಗ್ರಹ ಬೇರೆಯದೇ ರೀತಿಯಲ್ಲಿ ಕಂಡಿತ್ತು. ನನಗೆ ಅನಿಸಿದ್ದಿಷ್ಟೇ ಇದು ನನ್ನ ಕೆಲಸವಲ್ಲ. ಇಡೀ ವಿಗ್ರಹ ಬೇರೆಯದೇ ರೀತಿಯಲ್ಲಿ ಕಾಣುತ್ತಿತ್ತು. ಭಗವಂತ ಬೇರೆಯದೇ ರೂಪ ಪಡೆದುಕೊಂಡಿದ್ದಾನೆ ಎಂದು ಬಾಲಕ ರಾಮನ ವಿಗ್ರಹಕ್ಕೆ ಜೀವ ಕಳೆ ಬಂದಿರುವ ಬಗ್ಗೆ ಅವರು ಮಾತನಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಮುಖ್ಯ ‘ಯಜಮಾನ್’ ಆಗಿದ್ದರು. ಅವರು 11 ದಿನಗಳ ಕಾಲ ಕಠಿಣ ಆಚರಣೆಗಳಿಗೆ ಬದ್ಧರಾಗಿದ್ದರು. ಈ ಸಮಯದಲ್ಲಿ ಪ್ರಧಾನಿ ಮೋದಿ ನೆಲದ ಮೇಲೆ ಮಲಗಿದ್ದು ಮಾತ್ರವಲ್ಲದೆ, ಪ್ರತಿನಿತ್ಯ ಎಳನೀರು ಮಾತ್ರವೇ ಸೇವಿಸುತ್ತಿದ್ದರು. 11 ದಿನಗಳ ವ್ರತದ ವೇಳೆ ದಕ್ಷಿಣ ಭಾರತದ ಹಲವು ದೇವಸ್ಥಾನಗಳಿಗೆ ಮೋದಿ ಭೇಟಿ ನೀಡಿದ್ದರು.
ಪ್ರಾಣ ಪ್ರತಿಷ್ಟಾಪನೆ ಮುಗಿದು ಟಿವಿಯ ಕ್ಯಾಮೆರಾಗಳು ರಾಮಲಲ್ಲಾನ ಮುಖದತ್ತ ಜೂಮ್ ಮಾಡಿದಾಗ, ರಾಮಲಲ್ಲಾನ ಕಣ್ಣುಗಳು ಎಲ್ಲರನ್ನೂ ಮಂತ್ರಮುಗ್ಧಗೊಳಿಸಿವೆ. ಅದರೊಂದಿಗೆ ರಾಮಲಲ್ಲಾನ ನಗು ಕೂಡ ಕೆಲವರಿಗೆ ಧನ್ಯತಾ ಭಾವ ಮೂಡಿಸಿದೆ. ಹೆಚ್ಚಿನವರು ಬಾಲರಾಮನನ್ನು ವರ್ಣಿಸಲು ಪದಗಳೇ ಸಿಗೋದಿಲ್ಲ. ಮೂರ್ತಿ ಅತ್ಯದ್ಭುತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಮ್ ಲಲ್ಲಾ ಅವರ ಮೋಡಿಮಾಡುವ ನಗುವಿನ ಬಗ್ಗೆ ಮಾತನಾಡಿದ ಅರುಣ್ ಯೋಗಿರಾಜ್, ಕಲ್ಲಿನಿಂದ ನಿಮಗೆ ಕೆಲಸ ಮಾಡಲು ಒಂದೇ ಒಂದು ಅವಕಾಶವಿರುತ್ತದೆ ಎನ್ನುವ ಎಚ್ಚರಿಕೆಯಲ್ಲಿ ಈ ಕೆಲಸ ಮಾಡಿದ್ದೆ ಎಂದಿದ್ದಾರೆ. ಆದರೆ, ಇಡೀ ಮೂರ್ತಿ ಕೆತ್ತನೆ ವೇಳೆ ದೈವಿಕ ಬಲವೇ ಹೆಚ್ಚಾಗಿ ಕೆಲಸ ಮಾಡಿತ್ತು ಎಂದಿದ್ದಾರೆ.
ಕಲ್ಲಿಗೆ ಭಾವ ಮೂಡಿಸುವುದು ಸುಲಭದ ಕೆಲಸವಲ್ಲ. ಅದರೊಂದಿಗೆ ನೀವು ಸಾಕಷ್ಟು ಸಮಯ ಕೆಲಸ ಮಾಡಬೇಕು. ಅದಕ್ಕಾಗಿ ನಾನು ಕೂಡ ಕಲ್ಲಿನೊಂದಿಗೆ ಸಾಕಷ್ಟು ಸಮಯ ಕಳೆದು, ಹೋಮ್ವರ್ಕ್ ಮಾಡುತ್ತಿದ್ದೆ. ಮಕ್ಕಳ ಆಟಪಾಠವನ್ನು ನೋಡುತ್ತಿದೆ. ಕೊನೆಗೆ ಎಲ್ಲವೂ ಆಗಿದ್ದು ರಾಮಲಲ್ಲಾನಿಂದ ಮಾತ್ರ ಎಂದು ಮೈಸೂರು ಮೂಲದ ಅರುಣ್ ಹೇಳಿದ್ದಾರೆ. ತಮ್ಮ ಕುಟುಂಬದ ಐದನೇ ತಲೆಮಾರಿನ ಶಿಲ್ಪಿ ತಾವು ಎನ್ನುವ ಅರುಣ್, ಇದೆಲ್ಲವೂ ಆಗಿದ್ದು ಭಗವಾನ್ ರಾಮನಿಂದಲೇ ಎಂದು ಹೇಳುತ್ತಾರೆ.
“ಅಯೋಧ್ಯೆಯಲ್ಲಿ ದೀಪಾವಳಿಯನ್ನು ಆಚರಿಸುವಾಗ, ನಾನು ಚಿಕ್ಕ ಮಕ್ಕಳು ಹಬ್ಬವನ್ನು ಆಚರಿಸುವ ಅದೃಷ್ಟವನ್ನು ನೋಡಿದೆ. ಅಲ್ಲಿಂದ ನನ್ನ ಮನಸ್ಸಿನಲ್ಲಿ ಒಂದು ಚಿತ್ರ ಬಂದಿತ್ತು. ಹಾಗಾಗಿ ಎಲ್ಲವೂ ಭಗವಾನ್ ರಾಮನಿಂದ ಬಂದಿದೆ ಎಂದು ಹೇಳಬಹುದು” ಎಂದು ಯೋಗಿರಾಜ್ ಹೇಳಿದರು.