Odisha Coolie Inspiring Story : ಈ ಜಗತ್ತಿನಲ್ಲಿ ಹೆಸರು ಗಳಿಸುವುದು ಸುಲಭವಲ್ಲ, ಏಕೆಂದರೆ ಒಬ್ಬ ವ್ಯಕ್ತಿ ಹೆಸರು ಗಳಿಸಬೇಕೆಂದರೆ ಆತ ಕಷ್ಟಪಟ್ಟು ಕೆಲಸ ಮಾಡಬೇಕು ಮತ್ತು ಸಾಕಷ್ಟು ಶ್ರಮ ಪಡಲೇಬೇಕು. ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ವಾಸಿಸುವ 31 ವರ್ಷದ ನಾಗೇಶು ಪಾತ್ರೊ (Nageshu Patro) ಗೆ ಈ ಸಾಲು ಸರಿಯಾಗಿ ಹೊಂದಿಕೊಳ್ಳುತ್ತದೆ. ಒಡಿಶಾದ ಗಂಜಾಂ ಜಿಲ್ಲೆಯ ಬೆರ್ಹಾಂಪುರ ರೈಲು ನಿಲ್ದಾಣದಲ್ಲಿ, ಕೆಂಪು ಬಟ್ಟೆ, ಟವೆಲ್ ಧರಿಸಿ ತಲೆ ಮತ್ತು ಭುಜದ ಮೇಲೆ ಪ್ರಯಾಣಿಕರ ಸಾಮಾನುಗಳನ್ನು ಹೊತ್ತ ವ್ಯಕ್ತಿಯ ಧ್ವನಿ ಕೇಳಿಸುತ್ತದೆ. ಈ ವ್ಯಕ್ತಿ ಬೇರೆ ಯಾರೂ ಅಲ್ಲ ನಾಗೇಶ ಪಾತ್ರೋ. ಜನರು ಇವರನ್ನು ಮಾಸ್ಟರ್‌ಜೀ ಎಂದೂ ಕರೆಯುತ್ತಾರೆ.
ಜನರು ಮೋಜಿಗಾಗಿ ಇವರನ್ನ ಮಾಸ್ಟರ್ ಜೀ ಎಂದು ಕರೆಯುವುದಿಲ್ಲ. ನಾಗೇಶ್ ಪಾತ್ರೋ ನಿಜವಾಗಿಯೂ ಒಬ್ಬ ಶಿಕ್ಷಕ. ಹಗಲಿನಲ್ಲಿ ಖಾಸಗಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಾರೆ. ಇದರೊಂದಿಗೆ ಬಡ ಮಕ್ಕಳಿಗಾಗಿ ಉಚಿತ ಕೋಚಿಂಗ್ ಸೇವೆಯನ್ನೂ ಆರಂಭಿಸಿದ್ದು, ಅದರಲ್ಲಿ ಪಾಠ ಮಾಡುತ್ತಾ ರಾತ್ರಿ ವೇಳೆ ರೇಲ್ವೆ ಸ್ಟೇಷನ್‌ನಲ್ಲಿ ಕೂಲಿ (ಹಮಾಲಿ) ಕೆಲಸವನ್ನೂ ಮಾಡುತ್ತಿದ್ದಾರೆ.
ಬನ್ನಿ ನಿಮಗೆ ನಾಗೇಶ್ ಪಾತ್ರೋ ರವರ ಸ್ಪೂರ್ತಿದಾಯಕ (Odisha Coolie Inspiring Story) ಸ್ಟೋರಿಯ ಬಗ್ಗೆ ತಿಳಿಸಿತ್ತೇವೆ
2011 ರಿಂದ ಕೂಲಿ ಕೆಲಸ ಮಾಡುತ್ತಿದ್ದಾರೆ
ನಾಗೇಶ ಅವರು ರೈಲ್ವೇ ನಿಲ್ದಾಣದಲ್ಲಿ ಒಬ್ಬ ರೆಜಿಸ್ಟರ್ಡ್ (ನೋಂದಾಯಿತ) ಕೂಲಿಯಾಗಿದ್ದು ಒಂದಲ್ಲ ಎರಡಲ್ಲ ಬರೋಬ್ಬರು 2011 ರಿಂದ ಕೂಲಿ ಕೆಲಸ ಮಾಡುತ್ತಿದ್ದಾರೆ. 2020 ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಹರಡಿದ ನಂತರ, ಅವರ ಜೀವನವೇ ಸಂಪೂರ್ಣವಾಗಿ ತಲೆಕೆಳಗಾಯಿತು. ಬಹುತೇಕ ಎಲ್ಲ ರೈಲುಗಳ ಸಂಚಾರವೂ ಸ್ಥಗಿತಗೊಂಡಿದ್ದವು. ಇದರಿಂದಾಗಿ ಅವರು ತಮ್ಮ ಜೀವನೋಪಾಯವನ್ನೇ ಕಳೆದುಕೊಂಡರು. ಈ ವೇಳೆ ಖಾಲಿ ಕೂರುವ ಬದಲು ಹತ್ತನೇ ತರಗತಿಯ ಮಕ್ಕಳಿಗೆ ಪಾಠ ಮಾಡಲು ಆರಂಭಿಸಿದರು.
ಬಡ ಮಕ್ಕಳಿಗಾಗಿ ಕೋಚಿಂಗ್ ಸೆಂಟರ್ ಸ್ಥಾಪನೆ
ಮಕ್ಕಳಿಗೆ ಪಾಠ ಮಾಡುತ್ತಲೇ 8ರಿಂದ 12ನೇ ತರಗತಿಯ ಮಕ್ಕಳಿಗಾಗಿ ಕೋಚಿಂಗ್ ಸೆಂಟರ್ ಸ್ಥಾಪಿಸಿದರು. ಅವರ ಕೋಚಿಂಗ್‌ನಲ್ಲಿ ಬಹುತೇಕ ಬಡ ಮಕ್ಕಳೇ ಓದಲು ಬರುತ್ತಾರೆ. ಅವರೇ ಮಕ್ಕಳಿಗೆ ಹಿಂದಿ ಮತ್ತು ಒಡಿಯಾದಲ್ಲಿ ಕಲಿಸುತ್ತಾರೆ. ಉಳಿದ ವಿಷಯಗಳಿಗೆ ನಾಲ್ವರು ಶಿಕ್ಷಕರನ್ನು ಕೋಚಿಂಗ್ ಸೆಂಟರ್ ನಲ್ಲಿ ಇರಿಸಿಕೊಂಡಿದ್ದಾರೆ. ಈ ಶಿಕ್ಷಕರಿಗೆ ತಿಂಗಳಿಗೆ 2 ಸಾವಿರದಿಂದ 3 ಸಾವಿರ ರೂ. ಸಂಬಳವನ್ನು ನೀಡುತ್ತಾರೆ. ನಾಗೇಶ್ ತಮ್ಮ ಜೇಬು ತುಂಬಿಸಿಕೊಳ್ಳಲು ಕೂಲಿಯಾಗಿ ಕೆಲಸ ಮಾಡುವುದಿಲ್ಲ ಬದಲಾಗಿ ಈ ಶಿಕ್ಷಕರ ಸಂಬಳವನ್ನು ನೀಡಲು ರಾತ್ರಿ ಹೊತ್ತು ಕೂಲಿ ಕೆಲಸ ಮಾಡುತ್ತಾರೆ. ಅವರು ತಮ್ಮ ಶಿಕ್ಷಕ ಕೆಲಸದಿಂದ ತಿಂಗಳಿಗೆ ಸುಮಾರು ರೂ.8000 ಗಳಿಸುತ್ತಾರೆ. ಅಲ್ಲದೆ ಪ್ರತಿ ಅತಿಥಿ ಉಪನ್ಯಾಸಕ್ಕೆ (Guest Lecturing ) 200 ರೂಪಾಯಿ ಪಡೆಯುತ್ತಾರೆ.
ಆರ್ಥಿಕ ಅಡೆತಡೆಗಳಿಂದಾಗಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ
ನಾಗೇಶು ರವರ ಬಾಲ್ಯವು ಕಡು ಬಡತನದಲ್ಲಿಯೇ ಕಳೆದಿತ್ತು. ಅವರು ತಮ್ಮ ತಂದೆ ಚೌಧರಿ ರಾಮ ಪೋಷಕ ಮತ್ತು ತಾಯಿ ಕಾರಿ ಯವರೊಂದಿಗೆ ಹತ್ತಿರದ ಮನೋಹರ್ ಗ್ರಾಮದಲ್ಲಿ ವಾಸಿಸುತ್ತಿದ್ದರು. ನಾಗೇಶು ರವರ ಹೆತ್ತವರು ಮೇಕೆ ಮತ್ತು ಕುರಿಗಳನ್ನು ಮೇಯಿಸುತ್ತಿದ್ದರು. ಹಣಕಾಸಿನ ಅಡೆತಡೆಗಳಿಂದಾಗಿ, 2006 ರಲ್ಲಿ ಅವರು ಪ್ರೌಢಶಾಲೆಯನ್ನು ತೊರೆಯಬೇಕಾಯಿತು, ಏಕೆಂದರೆ ಅವರ ಪೋಷಕರು ನಾಗೇಶು ರವರ ಶಿಕ್ಷಣದ ಖರ್ಚನ್ನು ಭರಿಸವಷ್ಟು ಶಕ್ತರಾಗಿರಲಿಲ್ಲ. ಇದಾದ ನಂತರ ನಾಗೇಶು ಕೆಲಸ ಹುಡುಕಿಕೊಂಡು ಗುಜರಾತ್‌ನ ಸೂರತ್‌ಗೆ ಹೋಗಬೇಕಾಯಿತು.
ಸೂರತ್‌ನಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದರು
ಅವರು ಸೂರತ್‌ನ ಜವಳಿ ಮಿಲ್ ನಲ್ಲಿ ಸುಮಾರು 2 ವರ್ಷಗಳ ಕಾಲ ಕೆಲಸ ಮಾಡಿದರು, ಆದರೆ ಅದೇ ಸಮಯಕ್ಕೆ ಅವರು ಅನಾರೋಗ್ಯಕ್ಕೆ ಒಳಗಾದರು, ನಂತರ ಅವರು ಮನೆಗೆ ವಾಪಸ್ ಬರಬೇಕಾಯಿತು. ಇದಾದ ನಂತರ ಹೈದರಾಬಾದಿನ ಮಾಲ್ ಒಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಸಿಕ್ಕಿತು. ಅದೇ ಸಮಯಕ್ಕೆ 2011ರಲ್ಲಿ ಹೈದರಾಬಾದಿನಲ್ಲೇ ಹಮಾಲಿ ಕೆಲಸವೂ ಸಿಕ್ಕಿತು. ಕೂಲಿಯಾಗಿ ಕೆಲಸ ಮಾಡುವಾಗ, ಅವರು 2012 ರಲ್ಲಿ ಪತ್ರವ್ಯವಹಾರ ಕೋರ್ಸ್ ಮೂಲಕ ತಮ್ಮ XII ತರಗತಿ ಪರೀಕ್ಷೆಗೆ ಬರೆಯಲು ನಿರ್ಧರಿಸಿದರು. ಇದರ ನಂತರ ಅವರು ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಬರ್ಹಾಂಪುರ ವಿಶ್ವವಿದ್ಯಾಲಯದಿಂದ ಮಾಡಿದರು. ರಾತ್ರಿ ಹಮಾಲಿ ಕೆಲಸ ಮಾಡಿ ದುಡಿದ ಸ್ವಂತ ಹಣದಲ್ಲಿ ಉನ್ನತ ಶಿಕ್ಷಣವನ್ನೆಲ್ಲ ಮುಗಿಸಿದರು. ಅವರು ವೃತ್ತಿಯನ್ನು ಪ್ರೀತಿಸುವ ಕಾರಣ ಮತ್ತು ಬಡ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕು ಹಾಗು ಹಣದ ಕೊರತೆಯಿಂದ ಬಡಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣದಿಂದ ಬೋಧನೆಯನ್ನು ಮುಂದುವರೆಸುತ್ತ ಕೂಲಿ ಕೆಲಸವನ್ನೂ ಮಾಡುತ್ತೇನೆ ಎಂದು ನಾಗೇಶು ಹೇಳುತ್ತಾರೆ.