“ಮುಂದಿನ ಮುಖ್ಯಮಂತ್ರಿ ನಾನೇ” ಹೀಗಂತ ವಿಧಾನಸೌಧದಲ್ಲಿ ಹೇಳಿಕೊಂಡು ತಿರುಗಾಡುತ್ತಿರೋರು ಯಾರು ಗೊತ್ತೆ?

in Kannada News/News/ರಾಜಕೀಯ 301 views

ಬೆಂಗಳೂರು, ಜೂನ್ 7: ನಾಯಕತ್ವ ಬದಲಾವಣೆ ಮಾಡುವ ಇಂಗಿತ ದೆಹಲಿಯ ವರಿಷ್ಠರಿಗೆ ಇದೆಯೋ, ಇಲ್ಲವೋ, ಆದರೆ, ರಾಜಾಧಾನಿಯಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಳ್ಳಲಾರಂಭಿಸಿದೆ.

Advertisement

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು, ಯಡಿಯೂರಪ್ಪನವರೇ ನಮ್ಮ ನಾಯಕರು ಎಂದು ಸಹಿ ಸಂಗ್ರಹಿಸಿರುವ ವಿಚಾರ, ಬಿಜೆಪಿಯೊಳಗೆ ಸಂಚಲನವನ್ನು ಮೂಡಿಸಿದೆ. ಸಹಿ ಸಂಗ್ರಹದ ಬಗ್ಗೆ ಕೆಲವು ಸಚಿವರು ಅಸಮಾಧಾನವನ್ನೂ ವ್ಯಕ್ತ ಪಡಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ರೇಣುಕಾಚಾರ್ಯ, “ಕೆಲವರು ನಾವೇ ಮುಂದಿನ ಮುಖ್ಯಮಂತ್ರಿಯೆಂದು, ಜೇಬಿನಲ್ಲಿ ಚೀಟಿ ಇಟ್ಟುಕೊಂಡು, ವಿಧಾನಸೌಧದ ಒಳಗೆ ಹೊರಗೆ ಓಡಾಡುತ್ತಿದ್ದಾರೆ”ಎಂದು ಅರವಿಂದ್ ಬೆಲ್ಲದ್ ಅವರ ಹೆಸರನ್ನು ಉಲ್ಲೇಖಿಸದೇ ಟೀಕಿಸಿದ್ದಾರೆ.

“ನಾನು ಸಣ್ಣ ಮನುಷ್ಯ, ಅವರು ದೊಡ್ಡ ಮನುಷ್ಯರು, ಅವರ ಮುಂದೆ ನಾನೇನೂ ಅಲ್ಲ, ಅವರು ಕಣ್ಣು ತೆರೆದರೆ ಭಷ್ಮವಾಗಿ ಬಿಡುತ್ತೇನೆ. ಪಕ್ಕದ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರುವ ಸಾಮರ್ಥ್ಯ ಅವರಿಗೆ ಇದೆಯೇ’ಎಂದು ವ್ಯಂಗ್ಯವಾಗಿ ರೇಣುಕಾಚಾರ್ಯ ಅವರು ಬೆಲ್ಲದ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ನೂರಾರು ಪಾದಯಾತ್ರೆ, ಸಾವಿರಾರು ಹೋರಾಟಗಳನ್ನು ಮಾಡಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾರೆಯೇ ವಿನಃ, ಯಾರದೋ ಹೆಸರಿನಲ್ಲಿ ಗೆದ್ದು ಬಂದು ಸಿಎಂ ಆಗಿಲ್ಲ” ಎಂದು ರೇಣುಕಾಚಾರ್ಯ ಅವರು ಸಿಎಂ ಮೇಲಿನ ನಿಯತ್ತನ್ನು ಮುಂದುವರಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪನವರ ಬಗ್ಗೆ ಮೃಧು ಧೋರಣೆ ತೋರಿದ ಕಾಂಗ್ರೆಸ್

ಬಿಜೆಪಿ ಆಂತರಿಕ ಬೆಳವಣಿಗೆಗಳನ್ನು ಹತ್ತಿರದಿಂದ ಕಾದು ನೋಡುತ್ತಿರುವ ಕಾಂಗ್ರೆಸ್ ಯಡಿಯೂರಪ್ಪ ಅವರ ಬಗ್ಗೆ ಮೃಧು ಧೋರಣೆ ಅನುಸರಿಸುವ ಮೂಲಕ ಹಿಂದೆ “ಧರ್ಮ” ಸಂಕಟದಲ್ಲಿ ಆಗಿದ್ದ ಡ್ಯಾಮೇಜ್ ನ್ನು ಸರಿದೂಗಿಸುವ ಪ್ರಯತ್ನ ನಡೆಸುತ್ತಿದೆ.
ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಷಯದಲ್ಲಿ ಗುಂಪುಗಾರಿಕೆ ನಡೆಯುತ್ತಿದ್ದು, ಪ್ರತಿದಿನವೂ ಬೇರೆ ರೀತಿಯ ಬೆಳವಣಿಗೆಗಳಾಗುತ್ತಿವೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಕಾಂಗ್ರೆಸ್ ಸದ್ಯಕ್ಕೆ ಮೌನಕ್ಕೆ ಶರಣಾಗಿದೆ.

ಒಂದು ವೇಳೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರ ನಾಯಕತ್ವವನ್ನು ಬದಲಾವಣೆ ಮಾಡಿದರೆ ಅದರಿಂದ ವೀರಶೈವ ಲಿಂಗಾಯಿತ ಸಮುದಾಯದಲ್ಲಾಗುವ ಅಸಮದಾನದ ಲಾಭವನ್ನು ರಾಜಕೀಯವಾಗಿ ತನ್ನತ್ತ ತಿರುಗಿಸಿಕೊಳ್ಳಲು ತೆರೆ ಮರೆಯಲ್ಲಿ ತಂತ್ರಗ್ರಾರಿಕೆ ಹೆಣೆಯುತ್ತಿದೆ.
ಈ ಮೊದಲು ಯಡಿಯೂರಪ್ಪ ಅವರ ವಿರುದ್ಧ ಡಿ ನೋಟಿಫಿಕೇನ್ ಆರೋಪ ಕೇಳಿ ಬಂದು ಅವರ ಬಂಧನವಾಗುವ ಸಂದರ್ಭ ಎದುರಾದಾಗ ರಾಜ್ಯದಲ್ಲಿ ಒಂದು ರೀತಿಯ ಭಾವನಾತ್ಮಕ ಆಕ್ರೋಶ ಮಡುಗಟ್ಟಿತ್ತು.

ಯಡಿಯೂರಪ್ಪ ಅವರಿಗೆ ಅನಗತ್ಯವಾಗಿ ತೊಂದರೆ ನೀಡಲಾಗುತ್ತಿದೆ ಎಂಬ ಸಿಟ್ಟು ಅವ್ಯಕ್ತವಾಗಿ ಕುದಿಯುತ್ತಿತ್ತು. ಇದಕ್ಕೆಲ್ಲಾ ಕಾಂಗ್ರೆಸ್ ಹೊಣೆ ಎಂದು ಬಿಜೆಪಿ ನಾಯಕರು ಬಹಿರಂಗ ಹೇಳಿಕೆಗಳನ್ನು ನೀಡಿ ಜನ ಸಮುದಾಯದ ಸಿಟ್ಟನ್ನು ಕಾಂಗ್ರೆಸ್ ನತ್ತ ತಿರುಗಿಸುವ ಯತ್ನ ಮಾಡಿದ್ದರು.

ಆದರೆ ಆ ಸಂದರ್ಭದಲ್ಲಿ ಕಾಂಗ್ರೆಸ್ ಯಾವುದರಲ್ಲೂ ನೇರ ಪಾತ್ರ ವಹಿಸಿರಲಿಲ್ಲ, ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದವರು ಇಬ್ಬರು ವಕೀಲರು, ಅದರ ವಿಚಾರಣಗೆ ಅನುಮತಿ ನೀಡಿದ್ದು ರಾಜ್ಯಪಾಲರು, ವಿಚಾರಣೆ ನಡೆಸಿದ್ದು ಲೋಕಾಯುಕ್ತ ನ್ಯಾಯಾಲಯ. ರಾಜ್ಯಪಾಲರನ್ನು ಹೊರತು ಪಡಿಸಿ ಉಳಿದಂತೆ ಯಾರಿಗೂ ಕಾಂಗ್ರೆಸ್ ಜೊತೆ ಸಂಬಂಧ ಇರಲಿಲ್ಲ. ಹಾಗಾಗಿ ಬಿಜೆಪಿ ಏನೇ ಸರ್ಕಸ್ ಮಾಡಿದರೂ ಜನರ ಸಿಟ್ಟಿನಿಂದ ಕಾಂಗ್ರೆಸ್ ಪಾರಾಗಿತ್ತು. ಅದರ ಪರಿಣಾಮ 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತದಿಂದ ಸರ್ಕಾರ ರಚಿಸಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು.

ಒಂದು ವೇಳೆ ಡಿನೋಟಿಫಿಕೇಷನ್ ವಿಚಾರಣೆಯಲ್ಲಿ ಕಾಂಗ್ರೆಸ್ ಸಣ್ಣ ಪಾತ್ರ ವಹಿಸಿದ್ದರೂ ಜನ ಸಮುದಾಯದ ಸಿಟ್ಟಿಗೆ ಗುರಿಯಾಗಿ ಮತ್ತೆ ನೆಲಕಚ್ಚ ಬೇಕಿತ್ತು. ಯಾರು ಏನೇ ಆರೋಪ ಮಾಡಿದರೂ ಯಡಿಯೂರಪ್ಪ ಜನಸಮುದಾಯದ ನಾಯಕ ಎಂಬುದು ನಿರ್ವಿವಾದ. ಅವರು ಯಾವುದೇ ಅಡೆ ತಡೆ ಇಲ್ಲದೆ ಆಡಳಿತ ನಡೆಸುವಾಗ ಪ್ರತಿಪಕ್ಷವಾಗಿ ಕಾಂಗ್ರೆಸ್ ಟೀಕೆಗಳನ್ನು ಮಾಡುತ್ತದೆ. ದುರ್ಬಲ ಮುಖ್ಯಮಂತ್ರಿ ಎಂದು ಕಿಡಿಕಾರುತ್ತದೆ. ಅದೇ ಯಡಿಯೂರಪ್ಪ ಬಿಜೆಪಿ ಆಂತರಿಕ ಬೆಳಣಿಗೆಗಳಿಂದ ಹೈರಾಣಾದಾಗ ಕಾಂಗ್ರೆಸ್ ತಟಸ್ಥ ನಿಲುವು ಅನುಸರಿಸಲಿದೆ.

ವರ್ತಮಾನದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿದರೆ ಅದರಿಂದ ಜನ ಸಮುದಾಯದಲ್ಲಿ ಮತ್ತೆ ಅಸಮದಾನ ಭುಗಿಲೇಳಲಿದೆ. ಅದರಿಂದ ಸಹಜವಾಗಿ ರಾಜಕೀಯವಾಗಿ ಕಾಂಗ್ರೆಸ್ ಗೆ ಲಾಭವಾಗಲಿದೆ. ಹಾಗಾಗಿ ಪ್ರಸ್ತುತ ಬಿಜೆಪಿ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ತಟಸ್ಥ ನಿಲುವು ಅನುಸರಿಸುತ್ತದೆ. ರಾಜಕೀಯ ಬೆಳವಣಿಗೆಗಳು ತೀವ್ರವಾಗುತ್ತಿದ್ದಂತೆ ಯಡಿಯೂರಪ್ಪ ಅವರ ಬಗ್ಗೆ ಅನುಕಂಪದ ಮಾತುಗಳನ್ನಾಡಲಾರಂಭಿಸಿದೆ.

ಆಡಳಿತಾ ರೂಢ ಪಕ್ಷದಲ್ಲಿನ ಆತಂರಿಕ ಬೆಳವಣಿಗೆಗಳಿಂದ ರಾಜ್ಯದ ಆಡಳಿತ ವ್ಯವಸ್ಥೆ ಹದಗೆಡುತ್ತಿದೆ. ಅದರ ಬಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕಿದ್ದ ಕಾಂಗ್ರೆಸ್ ರಾಜಕೀಯ ಲೆಕ್ಕಾಚಾರದಲ್ಲಿ ಮುಳುಗಿದ್ದು, ಕಾದು ನೋಡುವ ತಂತ್ರಗಾರಿಕೆ ಅನುಸರಿಸಲಾರಂಭಿಸಿದೆ.

 

Advertisement
Share this on...