ಶಾಲೆಗೆ ಪ್ರತಿ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿಯೇ ಬರಬೇಕು, ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್(Hijab) ಅಥವಾ ಬುರ್ಖಾ ಧರಿಸಿದರೆ ನಾಳೆ ನಮ್ಮ ಮಕ್ಕಳೂ ಲೆಹೆಂಗಾ ಧರಿಸಿ ಬರುತ್ತಾರೆ ಎಂದು ರಾಜಸ್ಥಾನ ಬಿಜೆಪಿ ಶಾಸಕ ಬಾಲ್ ಮುಕುಂದ ಆಚಾರ್ಯ ಹೇಳಿದ್ದಾರೆ. ಹಿಜಾಬ್ ವಿವಾದದ ಕುರಿತು ಶಾಸಕರು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಜೈಪುರದಲ್ಲಿ ಸೋಮವಾರ ಸರ್ಕಾರಿ ಶಾಲೆಯ ಮುಸ್ಲಿಂ ವಿದ್ಯಾರ್ಥಿಗಳು ಸುಭಾಷ್ ಚೌಕ್ ಪೊಲೀಸ್ ಠಾಣೆಯಲ್ಲಿ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿ ರಸ್ತೆ ತಡೆ ನಡೆಸಿದರು.
ಸುಮಾರು ಆರು ಗಂಟೆಗಳ ಕಾಲ ಪ್ರತಿಭಟನೆ ಮುಂದುವರೆಯಿತು. ನಂತರ ಪೊಲೀಸ್ ಅಧಿಕಾರಿಗಳು ಶಾಸಕ ರಫೀಕ್ ಖಾನ್ ಮತ್ತು ಅಮೀನ್ ಕಗ್ಜಿ ಅವರೊಂದಿಗೆ ಮಾತುಕತೆ ನಡೆಸಿ ಸಮಾಧಾನಪಡಿಸಿದರು. ಮಾಹಿತಿ ಪ್ರಕಾರ, ಜನವರಿ 27 ರಂದು ಬಾಲ್ ಮುಕುಂದ ಆಚಾರ್ಯ ಅವರು ಗಂಗಾಪೋಲ್ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇಲ್ಲಿ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿರುವುದನ್ನು ನೋಡಿದ ಶಾಸಕರು ಪ್ರಾಂಶುಪಾಲರೊಂದಿಗೆ ಮಾತನಾಡಿದ್ದರು.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ಸಭೆಯಲ್ಲಿ ಜೈ ಸಿಯಾರಾಮ್ ಘೋಷಣೆಗಳನ್ನು ಕೂಗಿದ್ದಾರೆ ಎಂದು ಆರೋಪಿಸಿದ್ದಾರೆ. ಅದಕ್ಕೆ ಶಾಸಕರು ವಿಡಿಯೋ ಬಿಡುಗಡೆ ಮಾಡಿದ್ದು, ನನ್ನ ನೆಚ್ಚಿನ ಪ್ರಭುಗಳು ರಾಮ ಮತ್ತು ಹನುಮಂತ, ಯಾರಿಗಾದರೂ ಶುಭಾಶಯ ಹೇಳುವಾಗ ಅಥವಾ ಸಂಬೋಧಿಸುವಾಗ ನಾನು ದೇವರ ಹೆಸರನ್ನು ತೆಗೆದುಕೊಳ್ಳುತ್ತೇನೆ. ಇದಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸುವಂತಿಲ್ಲ.
ಶಿಕ್ಷಕರ ಬಳಿ ಶಾಲೆಯಲ್ಲಿ ಎರಡು ತರಹದ ವಸ್ತ್ರಗಳನ್ನು ತೊಡಲು ಅವಕಾಶವಿದೆಯೇ ಎಂದು ನಾನು ಕೇಳಿದ್ದೆ, ಸಣ್ಣ ಮಕ್ಕಳು ಹಿಜಾಬ್, ಬುರ್ಖಾದಲ್ಲಿದ್ದರು. ಎಲ್ಲರಿಗೂ ಶಾಲೆಯಲ್ಲಿ ಒಂದೇ ನಿಯಮವಿಬೇಕು. ಇಲ್ಲವಾದಲ್ಲಿ ನಮ್ಮ ಮಕ್ಕಳು ಕೂಡ ಲೆಹೆಂಗಾ ಇನ್ನಿತರೆ ಉಡುಪು ಧರಿಸಿ ಬರುತ್ತಾರೆ.
ನಾನು ಮದರಸಾಗಳಿಗೆ ಹೋಗಿ ವಸ್ತ್ರ ಬದಲಾವಣೆ ಮಾಡಿ ಎಂದು ಕೇಳಿಲ್ಲ, ಆದರೆ ಸರ್ಕಾರಿ ಶಾಲೆಗಳಿಲ್ಲ ಇರುವ ನಿಯಮವನ್ನು ಪ್ರತಿಯೊಬ್ಬರೂ ಪಾಲಿಸಬೇಕೆಂದು ಹೇಳಿದ್ದಾರೆ.
ಶಾಸಕರ ಹೇಳಿಕೆ ಬಳಿಕ ಸಚಿವ ಕಿರೋರಿ ಲಾಲ್ ಕೂಡ ಈ ಕುರಿತು ಹೇಳಿಕೆ ನೀಡಿದ್ದಾರೆ, ರಾಜಸ್ಥಾನದಲ್ಲಿ ಹಿಜಾಬ್ ನಿಷೇಧಿಸಬೇಕು, ಎಲ್ಲರೂ ಒಂದೇ ಬಗೆಯ ವಸ್ತ್ರಗಳನ್ನು ಧರಿಸಬೇಕು. ಅನೇಕ ದೇಶಗಳಲ್ಲಿ ಹಿಜಾಬ್ ನಿಷೇಧಿಸಲಾಗಿದೆ. ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಣ್ಣುಮಕ್ಕಳು ಹಿಜಾಬ್ ಧರಿಸಿ ಶಾಲೆಗೆ ಹೋಗುವಂತಿಲ್ಲ ಎಂದು ಹೇಳಲಾಗಿತ್ತು.
ಅದರಿಂದ ಗದ್ದಲ ಎದ್ದಿತ್ತು. ಡಿಸೆಂಬರ್ 2023ರಲ್ಲಿ ಸಿದ್ದರಾಮಯ್ಯ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಮೇಲಿನ ನಿಷೇಧವನ್ನು ತೆಗೆದುಹಾಕಲು ನಿರ್ಧರಿಸಿದರು. ಬಟ್ಟೆ, ಆಹಾರ ಅವರ ವೈಯಕ್ತಿಕ ವಿಚಾರ ಎಂದರು.