ರಾತ್ರೋ ರಾತ್ರಿ ಕೋಟ್ಯಾಧೀಶ್ವರರಾದ ಸ್ಟಾರ್ ಆಟಗಾರರು: ಒಲಿಂಪಿಕ್ಸ್ ಮೆಡಲ್ ವಿಜೇತರು ಪಡೆದ ಬಹುಮಾನ, ಹಣಕ್ಕೆ ಎಷ್ಟು ಟ್ಯಾಕ್ಸ್ ಕಟ್ಟಬೇಕಿದೆ ನೋಡಿ

in Kannada News/News/ಕ್ರೀಡೆ 61 views

ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್ ಪದಕ ಸಾಧನೆಯ ಬೆನ್ನಲ್ಲೇ ಚಿನ್ನ ವಿಜೇತ ನೀರಜ್ ಚೋಪ್ರಾ ಸಹಿತ ಎಲ್ಲರಿಗೂ ಕೋಟಿ ಕೋಟಿ ರೂಪಾಯಿ ಮೊತ್ತದ ಬಹುಮಾನ ಹರಿದುಬಂದಿದೆ. ಈ ಮೂಲಕ ಎಲ್ಲ ಕ್ರೀಡಾಪಟುಗಳು ಶ್ರೀಮಂತರಾಗಿದ್ದಾರೆ. ಆದರೆ ಅವರ ಈ ಬಹುಮಾನ ಮೊತ್ತ ತೆರಿಗೆ ಮುಕ್ತವಾಗಿರುವುದಿಲ್ಲ. ಪದಕ ವಿಜೇತರು ತಾವು ಪಡೆದ ಭಾರಿ ಬಹುಮಾನಕ್ಕೆ ದೊಡ್ಡ ಮೊತ್ತದ ತೆರಿಗೆಯನ್ನೂ ಪಾವತಿಸಬೇಕಿದೆ.

ಎಲ್ಲ ಪದಕ ವಿಜೇತರು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಪಡೆಯುವ ಮೊತ್ತಕ್ಕೆ ಹೊರತಾಗಿ ಮತ್ತೆಲ್ಲ ಬಹುಮಾನಗಳಿಗೆ ತೆರಿಗೆ ಪಾವತಿಸಬೇಕಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10 (17ಎ)ರ ಪ್ರಕಾರ, ಕೇಂದ್ರ-ರಾಜ್ಯ ಸರ್ಕಾರಗಳಿಂದ ಪಡೆಯುವ ಬಹುಮಾನ ಮೊತ್ತಕ್ಕೆ ತೆರಿಗೆ ವಿನಾಯಿತಿ ದೊರೆಯಲಿದೆ. ಆದರೆ ಇತರ ಖಾಸಗಿ ಸಂಸ್ಥೆಗಳಿಂದ ಅವರು ಪಡೆಯುವ ಬಹುಮಾನಕ್ಕೆ ಶೇ. 30 ತೆರಿಗೆ ಪಾವತಿಸಬೇಕಾಗಿದೆ. ಇದು ನಗದು ಬಹುಮಾನ ಮಾತ್ರವಲ್ಲದೆ, ಕಾರು ಮತ್ತಿತರ ವಸ್ತುಗಳ ರೂಪದ ಉಡುಗೊರೆಗಳಿಗೂ ಅನ್ವಯಿಸಲಿದೆ.

ಇನ್ನು 4ನೇ ಸ್ಥಾನಕ್ಕೆ ತೃಪ್ತಿಪಟ್ಟ ಭಾರತದ ಮಹಿಳಾ ಹಾಕಿ ತಂಡದ 9 ಆಟಗಾರ್ತಿಯರಿಗೆ ಹರಿಯಾಣ ಸರ್ಕಾರ ತಲಾ 50 ಲಕ್ಷ ರೂ. ಬಹುಮಾನ ಪ್ರಕಟಿಸಿದೆ. ಆದರೆ ಅವರು ಪದಕ ವಿಜೇತರಲ್ಲದ ಕಾರಣ, ಈ ಬಹುಮಾನಕ್ಕೆ ತೆರಿಗೆ ಪಾವತಿಸಬೇಕಾಗಿದೆ. ಆದಾಯ ತೆರಿಗೆ ಕಾಯ್ದೆಯ ಅನ್ವಯ ಒಲಿಂಪಿಕ್ಸ್ ಅಲ್ಲದೆ ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಪದಕ ವಿಜೇತರಿಗೂ ಸರ್ಕಾರ ನೀಡುವ ಬಹುಮಾನ ಮಾತ್ರ ತೆರಿಗೆ ಮುಕ್ತವಾಗಿರುತ್ತದೆ.

ನೀರಜ್ 24 ಗಂಟೆಗಳಲ್ಲಿ 15 ಕೋಟಿ ರೂ. ಒಡೆಯ!

ನೀರಜ್ ಚೋಪ್ರಾ ಒಲಿಂಪಿಕ್ಸ್ ಸ್ವರ್ಣ ಪದಕ ಗೆಲುವಿನ ಸಾಧನೆಯ ಬೆನ್ನಲ್ಲೇ 24 ಗಂಟೆಗಳ ಒಳಗಾಗಿ ಸುಮಾರು 15 ಕೋಟಿ ರೂ. ಬಹುಮಾನ ಮೊತ್ತದ ಒಡೆಯರಾಗಿದ್ದಾರೆ. ಅವರ ತವರಿನ ಹರಿಯಾಣ ಸರ್ಕಾರ ಗರಿಷ್ಠ 6 ಕೋಟಿ ರೂ. ಬಹುಮಾನ ನೀಡಲಿದೆ. ಜತೆಗೆ ಪಂಜಾಬ್ ಸರ್ಕಾರ ಮತ್ತು ಬೈಜುಸ್ ಕಂಪನಿ ತಲಾ 2 ಕೋಟಿ ರೂ. ನೀಡಿದರೆ, ಮಣಿಪುರ ಸರ್ಕಾರ, ಬಿಸಿಸಿಐ, ಚೆನ್ನೈ ಸೂಪರ್‌ಕಿಂಗ್ಸ್ ಫ್ರಾಂಚೈಸಿ ತಲಾ 1 ಕೋಟಿ ರೂ. ಬಹುಮಾನ ಪ್ರಕಟಿಸಿದೆ. ಇದಲ್ಲದೆ ಕೇಂದ್ರ ಸರ್ಕಾರ ಮತ್ತು ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ತಲಾ 75 ಲಕ್ಷ ರೂ. ವಿತರಿಸಲಿದೆ. ಕರ್ನಾಟಕ ಸರ್ಕಾರ 15 ಲಕ್ಷ ರೂ. ನೀಡಲಿದ್ದರೆ, ಗುರುಗ್ರಾಮ ಮೂಲದ ಎಲಾನ್ ಗ್ರೂಪ್ ರಿಯಲ್ ಎಸ್ಟೇಟ್​ ಕಂಪನಿ 25 ಲಕ್ಷ ರೂ. ಬಹುಮಾನ ಪ್ರಕಟಿಸಿದೆ. ಜತೆಗೆ ಹರಿಯಾಣ ಸರ್ಕಾರ ಪ್ರಥಮ ದರ್ಜೆ ಕೆಲಸದ ಆರ್ ನೀಡಿದ್ದು, ರಿಯಾಯಿತಿ ದರದಲ್ಲಿ ನಿವೇಶನ ನೀಡುವುದಾಗಿಯೂ ಪ್ರಕಟಿಸಿದೆ. ಇದಲ್ಲದೆ ಮಹೀಂದ್ರಾ ಕಂಪನಿ, ಎಕ್ಸ್‌ಯುವಿ700 ಕಾರು ಉಡುಗೊರೆ ನೀಡಲಿದ್ದರೆ, ಇಂಡಿಗೋ ಕಂಪನಿ 1 ವರ್ಷ ಮತ್ತು ಗೋ ಫರ್ಸ್ಟ್ (ಗೋಏರ್​) ಕಂಪನಿ 5 ವರ್ಷ ಉಚಿತ ವಿಮಾನಯಾನದ ಕೊಡುಗೆ ಘೋಷಿಸಿದೆ.

ಮೀರಾಗೆ ಬಹುಮಾನ:
ಕೇಂದ್ರ ಸರ್ಕಾರ: 50 ಲಕ್ಷ ರೂ.
ಮಣಿಪುರ ಸರ್ಕಾರ: 1 ಕೋಟಿ ರೂ.
ರೈಲ್ವೇಸ್: 2 ಕೋಟಿ ರೂ.
ಬೈಜುಸ್: 1 ಕೋಟಿ ರೂ.
ಐಒಎ: 40 ಲಕ್ಷ ರೂ.
ಕರ್ನಾಟಕ ಸರ್ಕಾರ: 10 ಲಕ್ಷ ರೂ.
ಬಿಸಿಸಿಐ: 50 ಲಕ್ಷ ರೂ.

ರವಿಗೆ ಬಹುಮಾನ
ಹರಿಯಾಣ ಸರ್ಕಾರ: 4 ಕೋಟಿ ರೂ.
ಕೇಂದ್ರ ಸರ್ಕಾರ: 50 ಲಕ್ಷ ರೂ.
ಐಒಎ: 40 ಲಕ್ಷ ರೂ.
ಕರ್ನಾಟಕ ಸರ್ಕಾರ: 10 ಲಕ್ಷ ರೂ.
ಬೈಜುಸ್: 1 ಕೋಟಿ ರೂ.
ಬಿಸಿಸಿಐ: 50 ಲಕ್ಷ ರೂ.
ಹರಿಯಾಣ ಸರ್ಕಾರದಿಂದ ಪ್ರಥಮ ದರ್ಜೆ ಕೆಲಸ ಮತ್ತು ಶೇ. 50 ರಿಯಾಯಿತಿ ದರದಲ್ಲಿ ಜಮೀನು.

ಪಿವಿ ಸಿಂಧು ಬಹುಮಾನ: 
ಕೇಂದ್ರ ಸರ್ಕಾರ: 30 ಲಕ್ಷ ರೂ.
ಕರ್ನಾಟಕ ಸರ್ಕಾರ: 5 ಲಕ್ಷ ರೂ.
ಬೈಜುಸ್: 1 ಕೋಟಿ ರೂ.
ಐಒಎ: 25 ಲಕ್ಷ ರೂ.
ಆಂಧ್ರ ಸರ್ಕಾರ: 30 ಲಕ್ಷ ರೂ.
ಕರ್ನಾಟಕ ಸರ್ಕಾರ: 5 ಲಕ್ಷ ರೂ.
ಬಿಸಿಸಿಐ: 25 ಲಕ್ಷ ರೂ.

ಲವ್ಲಿನಾಗೆ ಬಹುಮಾನ
ಕೇಂದ್ರ ಸರ್ಕಾರ: 30 ಲಕ್ಷ ರೂ.
ಬೈಜುಸ್: 1 ಕೋಟಿ ರೂ.
ಐಒಎ: 25 ಲಕ್ಷ ರೂ.
ಕರ್ನಾಟಕ ಸರ್ಕಾರ: 5 ಲಕ್ಷ ರೂ.
ಅಸ್ಸಾಂ ಸರ್ಕಾರ: 50 ಲಕ್ಷ ರೂ.
ಅಸ್ಸಾಂ ಕಾಂಗ್ರೆಸ್: 3 ಲಕ್ಷ ರೂ.
ಬಿಸಿಸಿಐ: 25 ಲಕ್ಷ ರೂ.

ಭಜರಂಗ್‌ಗೆ ಬಹುಮಾನ
ಹರಿಯಾಣ ಸರ್ಕಾರ: 2.5 ಕೋಟಿ ರೂ.
ಬೈಜುಸ್: 1 ಕೋಟಿ ರೂ.
ಕೇಂದ್ರ ಸರ್ಕಾರ: 30 ಲಕ್ಷ ರೂ.
ಐಒಎ: 25 ಲಕ್ಷ ರೂ.
ಕರ್ನಾಟಕ ಸರ್ಕಾರ: 5 ಲಕ್ಷ ರೂ.
ಬಿಸಿಸಿಐ: 25 ಲಕ್ಷ ರೂ.

ಹಾಕಿ ಆಟಗಾರರಿಗೆ ಬಹುಮಾನ

ಕಂಚು ವಿಜೇತ ಭಾರತ ಹಾಕಿ ತಂಡದಲ್ಲಿರುವ ರಾಜ್ಯದ 8 ಆಟಗಾರರಿಗೆ ಪಂಜಾಬ್ ಸರ್ಕಾರ ತಲಾ 1 ಕೋಟಿ ರೂ. ಬಹುಮಾನ ಪ್ರಕಟಿಸಿದೆ. ಹರಿಯಾಣ ಸರ್ಕಾರ ತನ್ನ ರಾಜ್ಯದ ಇಬ್ಬರು ಆಟಗಾರರಿಗೆ ತಲಾ 2.5 ಕೋಟಿ ರೂ. ಬಹುಮಾನ ಪ್ರಕಟಿಸಿದೆ. ಜತೆಗೆ ಸರ್ಕಾರಿ ಕೆಲಸ ಮತ್ತು ರಿಯಾಯಿತಿ ದರದ ಜಮೀನು ಘೋಷಿಸಿದೆ. ಮಧ್ಯಪ್ರದೇಶ ಸರ್ಕಾರ, ಕಂಚು ವಿಜೇತ ಹಾಕಿ ತಂಡದಲ್ಲಿರುವ ತನ್ನ ರಾಜ್ಯದ ಇಬ್ಬರು ಆಟಗಾರರಿಗೆ ತಲಾ 1 ಕೋಟಿ ರೂ. ಬಹುಮಾನ ಘೋಷಿಸಿದೆ. ಕೇರಳ ಸರ್ಕಾರ ಗೋಲು ಕೀಪರ್ ಪಿಆರ್ ಶ್ರೀಜೇಶ್‌ಗೆ 2 ಕೋಟಿ ರೂ. ಬಹುಮಾನ ಪ್ರಕಟಿಸಿದೆ. ಜತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಉಪ ನಿರ್ದೇಶಕರಾಗಿದ್ದ ಅವರಿಗೆ ಜಂಟಿ ನಿರ್ದೇಶಕರಾಗಿ ಬಡ್ತಿ ನೀಡಲಾಗಿದೆ. ಪುರುಷರ ಹಾಕಿ ತಂಡದ ಎಲ್ಲ ಸದಸ್ಯರಿಗೆ ಬಿಸಿಸಿಐ ಒಟ್ಟು 1.25 ಕೋಟಿ ರೂ. ವಿತರಿಸಲಿದೆ. ಬೈಜುಸ್ 1 ಕೋಟಿ ರೂ. ವಿತರಿಸಲಿದೆ.

ಪದಕ ವಿಜೇತರಿಗೆ ಮೊಬೈಲ್ ಗಿಫ್ಟ್​
ಚೀನಾ ಮೂಲದ ಮೊಬೈಲ್ ಕಂಪನಿ ‘ಶವುಮಿ’, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಎಲ್ಲ ಕ್ರೀಡಾಪಟುಗಳಿಗೆ ಸ್ಮಾರ್ಟ್‌ಫೋನ್ ಉಡುಗೊರೆ ನೀಡುವುದಾಗಿ ಘೋಷಿಸಿದೆ. 69,999 ರೂ. ಬೆಲೆಯ ಶವುಮಿ ಮಿ11 ಅಲ್ಟ್ರಾ ಮೊಬೈಲ್‌ಅನ್ನು ವೈಯಕ್ತಿಕ ವಿಭಾಗದ ಪದಕ ವಿಜೇತರಿಗೆ ಗಿಫ್ಟ್​ ನೀಡಲಾಗುವುದು ಎಂದು ಶವುಮಿ ಕಂಪನಿ ತಿಳಿಸಿದೆ. ಇನ್ನು ಕಂಚು ವಿಜೇತ ಭಾರತದ ಪುರುಷರ ಹಾಕಿ ತಂಡದ ಎಲ್ಲ 16 ಆಟಗಾರರಿಗೆ 29,999 ರೂ. ಬೆಲೆಯ ‘ಮಿ 11ಎಕ್ಸ್’ ಸ್ಮಾರ್ಟ್‌ಫೋನ್ ನೀಡುವುದಾಗಿಯೂ ಕಂಪನಿ ತಿಳಿಸಿದೆ.

Advertisement
Share this on...