ರಾಮನಗರ:
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಾಲಕೃಷ್ಣ, ರಾಮ ಮಂದಿರ ರಾಜಕೀಯ ಸ್ವತ್ತಲ್ಲ. ಆದರೆ ಬಿಜೆಪಿಯವರು ಇದನ್ನು ರಾಜಕೀಯಕ್ಕೆ ಬಳಿಸಿಕೊಳ್ಳುತ್ತಿದ್ದಾರೆ. ಮನೆ ಮನೆಗೆ ಹೋಗಿ ಮಂತ್ರಾಕ್ಷತೆ ಕೊಡುತ್ತಿದ್ದಾರೆ. ನಾವು ಗೃಹಲಕ್ಷ್ಮೀ ಯೋಜನೆಯಡಿ ಎರಡು ಸಾವಿರ ರೂಪಾಯಿ ಕೊಡುತ್ತಿದ್ದೇವೆ. ಮಂತ್ರಾಕ್ಷತೆ ಕೊಟ್ಟವರಿಗೆ ಮತ ಹಾಗಬೇಕಾ ಅಥವಾ ಯಜಮಾನಿಯರಿಗೆ 2000 ರೂಪಾಯಿ ಹಣ ನೀಡಿದವರಿಗೆ ಮತ ಹಾಕಬೇಕಾ? ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ ಎಂದರು.
ನಾವೂ ಕೂಡ ರಾಮ ಮಂದಿರ ಕಟ್ಟಲು ಜಾಗ ಹುಡುಕುತ್ತಿದ್ದೇವೆ. 20 ಎಕರೆ ಜಾಗದಲ್ಲಿ ಮಂದಿರ ಕಟ್ಟುತ್ತಿದ್ದೇವೆ. ರಾಮ ಮಂದಿರವನ್ನು ಅದ್ಧೂರಿಯಾಗಿ ನಿರ್ಮಿಸುತ್ತೇವೆ. ರಾಮ ಮಂದಿರ ಬಿಜೆಪಿ ಅಥವಾ ಕಾಂಗ್ರೆಸ್ ಯಾವ ಪಕ್ಷದ ಸ್ವತ್ತಲ್ಲ. ಅದು ಈ ಸಮಾಜದ ಸ್ವತ್ತು. ರಾಮ ಮಂದಿರ ನಿರ್ಮಾಣಕ್ಕೆ ನಾವು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದು, ಜಿಲ್ಲಾಧಿಕಾರಿಗಳು, ಸಂಸದರು ಇದರ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: “ಹೈಕಮಾಂಡ್ ಹೇಳದ್ರೆ ಮಾತ್ರ ನಾವು ರಾಮಮಂದಿರಕ್ಕೆ ಹೋಗ್ತೀವಿ, ಇಲ್ಲಾಂದ್ರೆ ಇಲ್ಲ”: ಡಾ.ಜಿ ಪರಮೇಶ್ವರ್, ಗೃಹಸಚಿವ
ಹೈಕಮಾಂಡ್ನವರು ಹೇಳಿದ್ರೆ ಮಾತ್ರ ಜನವರಿ 22ರ ನಂತರವೂ ರಾಮ ಮಂದಿರಕ್ಕೆ ಹೋಗುತ್ತೇನೆ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಜನವರಿ 22 ನಂತರ ರಾಮ ಮಂದಿರಕ್ಕೆ ಹೋಗುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ನನಗೇನು ಗೊತ್ತಿಲ್ಲ. ಸರ್ಕಾರದ ಹಂತದಲ್ಲಿ ಈ ಬಗ್ಗೆ ಚರ್ಚೆ ನಡೆದಿಲ್ಲ. ಹೈಕಮಾಂಡ್ ಈಗಾಗಲೇ ರಾಮಮಂದಿರ ಕಾರ್ಯಕ್ರಮಕ್ಕೆ ಹೋಗಬಾರದು ಎಂಬ ನಿಲುವು ತೆಗೆದುಕೊಂಡಿದೆ. ಒಂದು ವೇಳೆ ಜನವರಿ 22 ನಂತರ ಹೋಗುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಿದರೆ ನಾವು ಹೋಗುತ್ತೇವೆ ಎಂದರು.
ಎಲ್ಲವನ್ನೂ ನಮ್ಮ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದೇವೆ. ನಮ್ಮದು ರಾಷ್ಟ್ರೀಯ ಪಕ್ಷ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತಾರೋ ಅದರಂತೆ ನಡೆಯಬೇಕು. ಅವರು ಹೋಗುವುದು ಬೇಡ ಎಂದು ಹೇಳಿದಾಗ ನಾವು ಅದರ ವಿರುದ್ದ ನಿಲುವು ತೆಗೆದುಕೊಳ್ಳಲು ಆಗುವುದಿಲ್ಲ. ಹೈಕಮಾಂಡ್ ಹೇಳಿದರೆ ಮಾತ್ರ ಹೋಗುತ್ತೇವೆ ಎಂದಿದ್ದಾರೆ.
ಈ ಹಿಂದೆ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ನಾನೂ ದೇಣಿಗೆ ನೀಡಿದ್ದೇನೆ ಎಂದಿದ್ದ ಡಾ. ಜಿ ಪರಮೇಶ್ವರ್
ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ನಾನು ಸಹ ದೇಣಿಗೆ ಕೊಟ್ಟಿದ್ದೇನೆ, ಅದು ನನ್ನ ವಯಕ್ತಿಕ ವಿಚಾರ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು ಜನೇವರಿ 22 ರ ನಂತರ ಪ್ರತ್ಯೇಕ ದಿನ ಹೋಗಿ ಪೂಜೆ ಸಲ್ಲಿಸುವ ಬಗ್ಗೆ ಹೈಕಮಾಂಡ್ ನಿರ್ಧರಿಸಿದರೆ ಅದಕ್ಕೂ ಸಿದ್ಧ. ನಾವು ಹಿಂದುಗಳಲ್ವಾ? ನಮ್ಮ ಪಕ್ಷದಲ್ಲಿಯೂ ಹಿಂದುಗಳಿಲ್ಲವೇ? ವಿಶೇಷ ಪೂಜೆ ಸಲ್ಲಿಸುತ್ತೇವೆ ಅದರಲ್ಲೇನು ತಪ್ಪಿದೆ ಎಂದಿದ್ದರು.