ರಾಹುಲ್ ಗಾಂಧಿ ವಿಚಾರದಲ್ಲಿ ಅವರ ಜೊತೆ ನಾನಿಂಥಾ ತಪ್ಪು ಮಾಡಬಾರದಿತ್ತು ಎಂದ ನಟಿ ರಮ್ಯಾ: ಆಗಿದ್ದೇನು ಗೊತ್ತಾ?

in Kannada News/News 105 views

ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರಿಗೆ ಸಂಬಂಧಿಸಿ ನಾನೊಂದು ತಪ್ಪು ಮಾಡಿದ್ದೇನೆ ಎಂದಿರುವ ರಮ್ಯಾ, ಆ ಘಟನೆಯ ವಿವರಗಳನ್ನು ಇನ್‌ಸ್ಟಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Advertisement

ತಾನು ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಹೆಡ್ ಆಗಿದ್ದಾಗ ರಾಹುಲ್ ವಿಷಯದಲ್ಲಿ ನಾನು ಒಂದು ತಪ್ಪು ಮಾಡಿದೆ ಎಂದು ರಮ್ಯಾ ಬರೆದುಕೊಂಡಿದ್ದಾರೆ. ಅವರು ಇದನ್ನು ಬರೆದುಕೊಂಡಿರುವುದು ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನ ಸ್ಟೇಟಸ್‌ನಲ್ಲಿ. ಆ ಘಟನೆ ಯಾವುದು? ಇಲ್ಲಿದೆ ಓದಿ.

“ಕೆಲಸದ ಜಾಗದಲ್ಲಿ ಕೆಲವು ಪ್ರಮಾದಗಳಾಗುತ್ತವೆ. ಕೆಲವೊಮ್ಮೆ ಅವು ಮಹಾ ಹಾನಿಕರವಾಗಿರುತ್ತವೆ. ನಾನೂ ಹಾಗೆ ಒಂದು ಪ್ರಮಾದ ಮಾಡಿದ್ದೆ. ಆಗ ನಾನು ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಹೆಡ್ ಆಗಿದ್ದೆ. ಆ ಘಟನೆಯ ಹಿಂದಿನ ವಿಚಾರಗಳೆಲ್ಲ ನಿಮಗೆ ಗೊತ್ತಿರಲಿಕ್ಕಿಲ್ಲ.”

“ರಾಹುಲ್ ಗಾಂಧಿ ಆಗ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಆಗ ಪಕ್ಷದ ವತಿಯಿಂದ ಜರ್ಮನಿಗೆ ಸಂಸದರ ಒಂದು ನಿಯೋಗದ ಭೇಟಿ ಆಯೋಜಿಸಲಾಗಿತ್ತು. ರಾಹುಲ್ ಗಾಂಧಿ ಅದರಲ್ಲಿದ್ದರು, ಹಾಗೂ ನಾನೂ ಜೊತೆಗಿದ್ದೆ. ಇಂಥ ಟ್ರಿಪ್‌ಗಳಲ್ಲಿ ಬಹಳ ಬಿಗಿಯಾದ ಶೆಡ್ಯೂಲ್ ಒಂದರ ಹಿಂದೆ ಒಂದರಂತೆ ಇರುತ್ತೆ. ಆ ಸಂದರ್ಭದಲ್ಲಿ ನಾವು ಬರ್ಲಿನ್‌ನಲ್ಲಿದ್ದ ಒಂದು ಮ್ಯೂಸಿಯಂಗೆ ಭೇಟಿ ನೀಡಿದೆವು. ಜರ್ಮನಿಯ ಹಲವು ಸಂಸದರು ನಮಗೆ ಸುತ್ತಮುತ್ತಲಿನ ವಿಚಾರ ತೋರಿಸುತ್ತಿದ್ದರು. ಆಗ ಅವರ ಜೊತೆ ರಾಹುಲ್ ಮಾತಾಡುತ್ತಿದ್ದರು, ನಿಂತು ಯೋಚಿಸುತ್ತಿದ್ದರು, ಬೇರೆ ಬೇರೆ ಭಂಗಿಗಳಲ್ಲಿದ್ದ ಚಿತ್ರಗಳನ್ನು ನಾನು ಸೆರೆಹಿಡಿದೆ. ಅವುಗಳನ್ನು ಭಾರತದಲ್ಲಿದ್ದ ನಮ್ಮ ಟೀಮ್‌ಗೆ ಕಳಿಸಿ, ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್ ಮಾಡಲು ತಿಳಿಸಿದೆ. ಅದು ‘ರಾಹುಲ್ ಗಾಂಧಿಯ ಹಲವು ಮುಖಗಳು’ ಎಂಬ ಕ್ಯಾಪ್ಷನ್‌ನಲ್ಲಿ ಪ್ರಕಟವಾಯಿತು.”

‘“ಕೂಡಲೇ ಅದು ವೈರಲ್ ಆಯಿತು. ಕ್ಷಣಾರ್ಧದಲ್ಲಿ ಮೀಡಿಯಾ ಅದನ್ನು ಬಾಚಿಕೊಂಡಿತು. ಮಾತ್ರವಲ್ಲ, ಟ್ರಾಲ್‌ಗಳು ಅದನ್ನು ಬಳಸಿಕೊಂಡು ಮನಸೋ ಇಚ್ಛೆ ಟ್ರಾಲ್‌ ಮಾಡಿದರು. ಗೇಲಿ, ಅಣಕ ಮಾಡಲಾಯಿತು. ರಾಹುಲ್‌ ವಿರೋಧಿಗಳು ಇದನ್ನು ಅವರ ವಿನೋದಕ್ಕೆ ಬಳಸಿಕೊಂಡರು. ನಾನು ಮಾಡಿದ ತಪ್ಪಿಗೆ ರಾಹುಲ್‌ಗೆ ಮುಜುಗರವಾಗುವಂತ ಸಂದರ್ಭ ಬಂತು. ನಾನು ಹಲವು ದಿನಗಳಿಂದ ನಿದ್ದೆಗೆಟ್ಟಿದ್ದೆ. ಆದರೆ ನನ್ನ ತಪ್ಪಿಗೆ ಅದು ವಿನಾಯಿತಿ ಅಲ್ಲವೇ ಅಲ್ಲ. ಎಲ್ಲರೂ ಈ ತಪ್ಪಿಗೆ ನನ್ನನ್ನು ಗುರಿ ಮಾಡಿದರು. ನನಗೆ ಶಿಕ್ಷೆ ಆಗಬಹುದಿತ್ತು. ಆದರೆ ಯಾರನ್ನು ಟ್ರಾಲ್ ಮಾಡಲಾಯಿತೋ ಆ ವ್ಯಕ್ತಿ, ಅಂದರೆ ರಾಹುಲ್‌ ಗಾಂಧಿ ಮಾತ್ರ ಕೂಲ್ ಆಗಿದ್ದರು.”

“ನಾನು ರಾಹುಲ್‌ ಬಳಿಗೆ ಹೋಗಿ, ನನ್ನಿಂದ ಆದ ಆ ತಪ್ಪಿಗೆ ಕ್ಷಮೆ ಯಾಚಿಸಿದೆ. ಸೋಶಿಯಲ್‌ ಮೀಡಿಯಾ ಹೆಡ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದೆ. ಆದರೆ ಅವರು ನಕ್ಕು ಹೇಳಿದರು- ಇಟ್ಸ್ ಓಕೆ. ಮುಂದಿನ ಸಲ ಪೋಸ್ಟ್ ಮಾಡುವಾಗ ತುಂಬಾ ಕೇರ್‌ಫುಲ್ ಆಗಿರು” ಎಂದರು. ನನಗೆ ಕಣ್ಣೀರು ಬಂತು. ನಾನು ನಿಜಕ್ಕೂ ರಾಹುಲ್‌ ಅವರನ್ನು ಹಸಿದ ತೋಳಗಳಿಗೆ ಆಹಾರವಾಗಿಸಿದ್ದೆ. ಬೇರೆ ಯಾರಾದರೂ ಆಗಿದ್ದರೆ ನನ್ನ ರಾಜೀನಾಮೆ ಪಡೆಯುತ್ತಿದ್ದರು. ಆದರೆ ಅವರು ನನ್ನ ಕ್ಷಮಿಸಿದರು. ಅದು ಅವರ ಉದಾತ್ತ ಗುಣವಾಗಿತ್ತು’.

ಸೋಶಿಯಲ್ ಮೀಡಿಯಾ ಹೆಡ್ ಆಗಿದ್ದಾಗ ನಾನು ಬಹಳ ಕಲಿತೆ. ರಾಹುಲ್‌ ಅವರ ವಿಶಾಲ ಹೃದಯ, ಸಹಾನುಭೂತಿ, ಕ್ಷಮೆ ನೀಡುವ ಗುಣ, ತಾನು ಪಡೆಯುವ ದ್ವೇ ಷ ಕ್ಕೆ ಪ್ರತಿಯಾಗಿ ಪ್ರೀತಿಯನ್ನು ನೀಡುವ ಗುಣ, ಸತ್ಯವನ್ನೇ ಸದಾ ಹೇಳುವ ಗುಣ, ಜನಗಳಿಗಾಗಿ ಮಾತಾಡುವ ಗುಣ, ದುರ್ಬಲ ಜನರಿಗಾಗಿ ಮಿಡಿಯುವುದು, ಕೋವಿಡ್‌ಗೆ ಸಂಬಂಧಿಸಿದಂತೆ ಅವರ ದೂರದೃಷ್ಟಿ, ಇವೆಲ್ಲವೂ ಅವರನ್ನು ಮುಂದಿನ ನಾಯಕ ಎಂದು ನಾನು ಗುರುತಿಸುವಂತೆ ಮಾಡಿದೆ.

“ಅವರ ಬಗ್ಗೆ ಹರಿದಾಡುವ ನೂರೆಂಟು ಗಾಸಿಪ್, ಫೇಕ್ ನ್ಯೂಸ್‌ಗಳನ್ನೆಲ್ಲ ನಾನು ಲೆಕ್ಕಿಸುವುದಿಲ್ಲ. ನೀವು ಇನ್ನೊಬ್ಬರ ಜೊತೆ ಹೇಗಿದ್ದೀರಿ ಎಂಬುದು ಮಾತ್ರ ಮುಖ್ಯವಾಗುವುದು.”

Advertisement
Share this on...