ಶ್ರಾವಣ ಮಾಸ ಆರಂಭವಾಗಿದೆ
ಮಾಂಸಾಹಾರ ಬಹುತೇಕರ ಪ್ರಿಯವಾದ ಆಹಾರ. ಬೇರೆ ಯಾವುದನ್ನು ಬೇಕಾದರೂ ಬಿಡುತ್ತೇನೆ ಒಂದು ತುಂಡು ಮಾಂಸವಿಲ್ಲದೆ ಇರಲಾಗದು ಎಂದು ಅನೇಕರು ಹೇಳಿರುವುದನ್ನು ಕೇಳಿದ್ದೇವೆ. ಆದರೂ ಹಿಂದು ಧರ್ಮದಲ್ಲಿ ಅನೇಕ ಸಂಪ್ರದಾಯಗಳು ಇರುವುದರಿಂದ ಶ್ರಾವಣ ಮಾಸವನ್ನು ಪವಿತ್ರ ತಿಂಗಳು ಎಂದು ಪರಿಗಣಿಸಿ ಮಾಂಸ ಸೇವನೆಯನ್ನು ತ್ಯಜಿಸಲಾಗುತ್ತದೆ. ಬಹುತೇಕರು ಈ ಪದ್ಧತಿಯನ್ನು ಆಚರಿಸಿಕೊಂಡು ಬಂದಿದ್ದಾರೆ. ಭಗವದ್ಗೀತೆ, ವೇದ, ಪುರಾಣ ಮತ್ತು ಮಹಾಭಾರತದಂತಹ ಹಿಂದೂ ಧರ್ಮಗ್ರಂಥಗಳ ಕೆಲವು ಭಾಗಗಳಲ್ಲೂ ಮಾಂಸ ಸೇವನೆ ಸರಿಯಲ್ಲ. ಪ್ರಾಣಿ ಹಿಂದೆ ಮಹಾ ಪಾಪ ಎಂದೇ ಹೇಳಲಾಗಿದೆ.
ಭಗವದ್ಗೀತೆಯಲ್ಲಿ ಒಂದು ಭಾಗದಲ್ಲಿ ಶ್ರೀಕೃಷ್ಣನು ತನ್ನ ಸಸ್ಯಾಹಾರದ ಆಯ್ಕೆಯನ್ನು ಘೋಷಿಸುತ್ತಾನೆ. ಯಾರಾದರೂ ನನಗೆ ಎಲೆ, ಹೂವು, ಹಣ್ಣು ಅಥವಾ ನೀರನ್ನು ಪ್ರೀತಿ ಮತ್ತು ಭಕ್ತಿಯಿಂದ ನೀಡಿದರೆ, ನಾನು ಅದನ್ನು ಸ್ವೀಕರಿಸುತ್ತೇನೆ ಎಂದು ಕೃಷ್ಣ ಪರಮಾತ್ಮ ಹೇಳಿದ್ದಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿ, ರಕ್ಷಾ ಬಂಧನ ಹಾಗೂ ನಾಗ ಪಂಚಮಿಯಂತಹ ಇತರ ಹಲವು ಪ್ರಮುಖ ಹಿಂದೂ ಹಬ್ಬಗಳು ಶ್ರಾವಣ ಮಾಸದಂದು ಬರುವುದರಿಂದ ಈ ತಿಂಗಳ ಪಾವಿತ್ರ್ಯವನ್ನು ಹೆಚ್ಚಿಸುತ್ತದೆ.
ಹಾಗಾದರೆ ವೈಜ್ಞಾನಿಕ ಕಾರಣಗಳೇನು?
ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡದಿರಲು ಇರುವ ವೈಜ್ಞಾನಿಕ ಕಾರಣಗಳನ್ನು ನೋಡಿದಾಗ, ಈ ತಿಂಗಳಲ್ಲಿ ಮುಂಗಾರು ಹವಾಮಾನ ಇರುವುದರಿಂದ ಸೂರ್ಯನ ಬೆಳಕಿನ ಕೊರತೆ ಹೆಚ್ಚಾಗಿರುತ್ತದೆ. ಹೀಗಾಗಿ ಶ್ರಾವಣ ಮಾಸದಲ್ಲಿ ನಮ್ಮ ಜೀರ್ಣಕ್ರಿಯೆ ವ್ಯವಸ್ಥೆ ದುರ್ಬಲವಾಗಿರುತ್ತದೆ. ಆದ್ದರಿಂದ ಮಾಂಸಾಹಾರ ಸೇವನೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಶ್ರಾವಣ ಉಪವಾಸದ ಸಮಯದಲ್ಲಿ, ವ್ಯಕ್ತಿಗಳು ಜೀರ್ಣಿಸಿಕೊಳ್ಳಲು ಸರಳವಾದ ಲಘು ತಿಂಡಿಗಳನ್ನು ಸೇವಿಸುತ್ತಾರೆ. ಮಳೆಗಾಲದಲ್ಲಿಯೂ ಸಹ ನೀರಿನಿಂದ ಹರಡುವ ಹಲವಾರು ರೋಗಗಳಿವೆ ಮತ್ತು ಪ್ರಾಣಿಗಳ ಮಾಂಸವು ಕಲುಷಿತವಾಗುವ ಅಪಾಯವಿದೆ. ಹೀಗಾಗಿ ಮಳೆಗಾಲದಲ್ಲಿ ಮಾಂಸಾಹಾರ ಸೇವನೆಯನ್ನು ನಿರ್ಲಕ್ಷಿಸುವುದೇ ಉತ್ತಮ ಎಂದು ಹೇಳಲಾಗಿದೆ.
ಜಲಚರ ಪ್ರಾಣಿಗಳನ್ನು ಸಂತಾನೋತ್ಪತ್ತಿ ಮಾಡಲು ಬಿಡಿ
ಮಳೆಗಾಲದಲ್ಲಿ ಮೀನು ಮತ್ತು ಇತರ ಜಲಚರಗಳು ಸಂತಾನೋತ್ಪತ್ತಿ ಮಾಡುತ್ತವೆ. ಮಳೆಗಾಲದಲ್ಲಿ ಮೀನುಗಳು ಮತ್ತು ಇತರ ರೀತಿಯ ಸಮುದ್ರಾಹಾರವನ್ನು ಜನರು ತಿನ್ನುವುದರಿಂದ ಜಲಚರಗಳಿಗೆ ಸಂತಾನೋತ್ಪತ್ತಿ ಮಾಡಲು ಯಾವುದೇ ಅವಕಾಶಗಳು ದೊರೆಯುವುದಿಲ್ಲ. ಅಲ್ಲದೆ, ಅವುಗಳ ಅಮೂಲ್ಯ ಸಮಯವನ್ನು ಕಸಿದುಕೊಂಡಂತಾಗುತ್ತದೆ. ಶ್ರಾವಣವನ್ನು ಹಿಂದು ಧರ್ಮದಲ್ಲಿ ಪ್ರೀತಿಯ ತಿಂಗಳು ಎಂದು ಪರಿಗಣಿಸಲಾಗುತ್ತದೆ. ಹಿಂದು ಸಂಸ್ಕೃತಿಯಲ್ಲಿ ಯಾವುದೇ ಜೀವಿಗಳನ್ನು ಕೊಲ್ಲುವುದು ಅನೈತಿಕವೆಂದು ಪರಿಗಣಿಸಲ್ಪಟ್ಟಿರುವುದರಿಂದ ಕೆಲ ಜನರು ಮಾಂಸಾಹಾರವನ್ನು ತಿರಸ್ಕರಿಸುತ್ತಾರೆ.
ಮಾನ್ಸೂನ್ ಮತ್ತು ಶ್ರಾವಣ ಮಾಸದಲ್ಲಿ ಮಾಂಸಹಾರ ಊಟವನ್ನು ಏಕೆ ತಪ್ಪಿಸಬೇಕು ಎಂಬುದಕ್ಕೆ ಇವಿಷ್ಟು ಪ್ರಚಲಿತ ಕಾರಣಗಳಾಗಿವೆ. ಆದಾಗ್ಯೂ, ಶ್ರಾವಣ ಸಮಯದಲ್ಲಿ ಮಾಂಸಾಹಾರಾ ಸೇವನೆಯ ವಿರುದ್ಧ ಯಾವುದೇ ಕಠಿಣ ಕಾನೂನುಗಳಿಲ್ಲ ಮತ್ತು ಪ್ರತಿಯೊಬ್ಬರೂ ರಜಾದಿನವನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತಾರೆ.