ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಯಾಗಿದೆ. ದೇಗುಲ ಸಾರ್ವಜನಿಕರಿಗೆ ತೆರೆದುಕೊಂಡಾಗಿನಿಂದಲೂ ಲಕ್ಷಾಂತರ ಭಕ್ತರು ದಿನವೂ ರಾಮಲಲ್ಲಾನ ದರ್ಶನ ಪಡೆಯುತ್ತಿದ್ದಾರೆ. ಇದೇ ವೇಳೆ ಮೂರ್ತಿ ಕೆತ್ತನೆ ವೇಳೆ ನಡೆದ ಕೆಲ ವಿಸ್ಮಯಗಳನ್ನು ನೆನಪು ಮಾಡಿಕೊಂಡಿದ್ದಾರೆ ಶಿಲ್ಪಿ, ಕನ್ನಡಿಗ ಮೈಸೂರಿನ ಅರುಣ್ ಯೋಗಿರಾಜ್.
ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಯಾಗಿದೆ. ದೇಗುಲ ಸಾರ್ವಜನಿಕರಿಗೆ ತೆರೆದುಕೊಂಡಾಗಿನಿಂದಲೂ ಲಕ್ಷಾಂತರ ಭಕ್ತರು ದಿನವೂ ರಾಮಲಲ್ಲಾನ ದರ್ಶನ ಪಡೆಯುತ್ತಿದ್ದಾರೆ. ಇದೇ ವೇಳೆ ಮೂರ್ತಿ ಕೆತ್ತನೆ ವೇಳೆ ನಡೆದ ಕೆಲ ವಿಸ್ಮಯಗಳನ್ನು ನೆನಪು ಮಾಡಿಕೊಂಡಿದ್ದಾರೆ ಶಿಲ್ಪಿ, ಕನ್ನಡಿಗ ಮೈಸೂರಿನ ಅರುಣ್ ಯೋಗಿರಾಜ್.
ರಾಮನ ನೋಡಲು ದಿನವೂ ಬರುತ್ತಿದ್ದ ಹನುಮ
ತಾವರೆಯ ಮೇಲೆ ನಿಂತಿರುವ ಐದು ವರ್ಷದ ಮಗುವಿನ ಪ್ರಾಯದ ರಾಮನ ಮೂರ್ತಿಯ ಕೆತ್ತನೆ ವೇಳೆ ದಿನವೂ ಕೆತ್ತನೆ ಮಾಡುತ್ತಿದ್ದ ಸ್ಥಳಕ್ಕೆ ಕೋತಿಯೊಂದು ಬಂದು ರಾಮನ ಮೂರ್ತಿಯನ್ನು ನೋಡಿಕೊಂಡು ಹೋಗುತ್ತಿತ್ತಂತೆ , ಪ್ರತಿದಿನವೂ ಮೂರ್ತಿ ಕೆತ್ತನೆ ಸ್ಥಳಕ್ಕೆ ಹನುಮ ಬಂದು ರಾಮನ ಮೂರ್ತಿಯ ಕೆತ್ತನೆ ಕಾರ್ಯವನ್ನು ನೋಡಿಕೊಂಡು ಹೋಗುತ್ತಿದ್ದ ಎಂದು ಅರುಣ್ ಯೋಗಿರಾಜ್ ಹೇಳಿದ್ದಾರೆ. ಬಹುಶಃ ಹನುಮನಿಗೂ ಮೂರ್ತಿಯನ್ನು ನೋಡಬೇಕು ಎನಿಸುತ್ತಿತ್ತೋ ಏನೋ ಅದು ಪ್ರತಿದಿನವೂ ತಾನು ಕೆತ್ತನೆ ಮಾಡುತ್ತಿದ್ದ ಮೂರ್ತಿಯ ಬಳಿ ಬಂದು ಹೋಗುತ್ತಿತ್ತು. ಪ್ರತಿದಿನ ಸಂಜೆ 4 ರಿಂದ 5 ಗಂಟೆ ಸುಮಾರಿಗೆ ಕೋತಿಯೊಂದು ರಾಮಲಲ್ಲಾ ನ ಮೂರ್ತಿಯನ್ನು ನೋಡಲು ಆಗಮಿಸುತ್ತಿತ್ತು. ನಾವು ಮೂರ್ತಿಗೆ ಕರ್ಟನ್ ಹಾಕುತ್ತಿದ್ದೆವು. ಆದರೂ ಈ ಕೋತಿ ರಾಮಲಲ್ಲಾನ ದರ್ಶನ ಪಡೆಯಲು ಬರುತ್ತಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
ಇನ್ನು ಅರುಣ್ ಯೋಗಿರಾಜ್ ಅವರ ಮಾತುಗಳಿಗೆ ಅನೇಕ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಅಯೋಧ್ಯೆಗೆ ರಾಮ ಬಂದ ಮೇಲೆ ತಾನು ಎಲ್ಲೆಡೆ ಇರುವೆನು ಎಂಬುದನ್ನು ಹನುಮಾನ್ ನಿಜ ಮಾಡಿದ್ದಾನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ರಾಮ್ ಲಲ್ಲಾನ ಪ್ರತಿಮೆಯ ಮೂಲಕ ಎಲ್ಲಾ ಹಿಂದೂಗಳಿಗೆ ಪದಗಳಿಂದ ವ್ಯಕ್ತಪಡಿಸಲಾಗದ ಖುಷಿಯನ್ನು ನೀವು ನೀಡಿದ್ದೀರಿ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ರಾಮನೇ ನನ್ನ ರಕ್ಷಕ, ಅವನೇ ನನ್ನನ್ನು ಆಯ್ಕೆ ಮಾಡಿದ
ರಾಮನೇ ನನ್ನ ರಕ್ಷಕ. ತನ್ನ ಮೂರ್ತಿಯನ್ನು ರೂಪಿಸಿಕೊಳ್ಳಲು ಆತನೇ ನನ್ನನ್ನು ಆಯ್ಕೆ ಮಾಡಿದ ಎಂದು ಅಯೋಧ್ಯೆ ರಾಮಪ್ರತಿಮೆ ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಈ ಹಿಂದೆ ಹೇಳಿದ್ದರು. ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು, ರಾಮನು ನನ್ನನ್ನು ಮತ್ತು ನನ್ನ ಕುಟುಂಬವನ್ನು ಎಲ್ಲಾ ಕೆಟ್ಟ ಸಮಯಗಳಿಂದ ರಕ್ಷಿಸುತ್ತಿದ್ದಾನೆ ಎಂದು ನಾನು ಯಾವಾಗಲೂ ಭಾವಿಸುತ್ತೇನೆ. ಆತನೇ ನನ್ನನ್ನು ಈ ಶುಭ ಕಾರ್ಯಕ್ಕೆ ಆಯ್ಕೆ ಮಾಡಿದ್ದಾರೆ ಎಂದು ನಾನು ಬಲವಾಗಿ ನಂಬುತ್ತೇನೆ ಎಂದರು.
ವಿಗ್ರಹವನ್ನು ಕೆತ್ತಲು ನಾನು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ. ಅವಿಶ್ರಾಂತವಾಗಿ ಕೆಲಸ ಮಾಡುತ್ತಿದ್ದೆ. ಆದರೆ ಇದು ವ್ಯರ್ಥವಲ್ಲ. ಅವು ಅತ್ಯಂತ ಮೌಲ್ಯಯುತ ಕ್ಷಣಗಳು. ನಾನು ಭೂಮಿಯ ಮೇಲಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ ಮತ್ತು ಇದು ನನ್ನ ಜೀವನದ ಅತ್ಯುತ್ತಮ ದಿನ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು. ನಾನು ನನ್ನ ತಂದೆಯಿಂದ ಶಿಲ್ಪಕಲೆ ಕಲೆಯನ್ನು ಕಲಿತಿದ್ದೇನೆ. ಅವರು ಇಂದು ಇಲ್ಲಿ ಇದ್ದಿದ್ದರೆ ನನ್ನ ವಿಗ್ರಹವನ್ನು ನೋಡಿ ತುಂಬಾ ಹೆಮ್ಮೆ ಪಡುತ್ತಿದ್ದರು ಎಂದು ಅವರು ಹೇಳಿದರು.
ಭವ್ಯ ದೇವಾಲಯಕ್ಕೆ ರಾಮಲಲ್ಲಾ ಮೂರ್ತಿಗಳನ್ನು ಗಣೇಶ್ ಭಟ್, ಅರುಣ್ ಯೋಗಿರಾಜ್ ಮತ್ತು ಸತ್ಯನಾರಾಯಣ ಪಾಂಡೆ ಎಂಬ ಮೂವರು ಶಿಲ್ಪಿಗಳು ತಯಾರಿಸಿದ್ದರು. ಮೂವರಲ್ಲಿ ಅರುಣ್ ಕೆತ್ತಿದ ಪ್ರತಿಮೆ ಆಯ್ಕೆಯಾಗಿದ್ದು, ಅದನ್ನು ಗರ್ಭಗುಡಿಯಲ್ಲಿ ಇರಿಸಲಾಗಿದೆ. ಇನ್ನೆರಡನ್ನು ಮಂದಿರದ ಇತರ ಭಾಗಗಳಲ್ಲಿ ಇರಿಸಲಾಗುವುದು ಎಂದು ದೇವಸ್ಥಾನದ ಟ್ರಸ್ಟ್ ತಿಳಿಸಿದೆ.
300 ಕೋಟಿ ವರ್ಷ ಹಳೆಯ ಬಂಡೆಯಲ್ಲಿ ಕೆತ್ತನೆ
ಅರುಣ್ ಯೋಗಿರಾಜ್ ನಿರ್ಮಿಸಿದ 51 ಇಂಚಿನ ವಿಗ್ರಹವನ್ನು ಮೂರು ಶತಕೋಟಿ ವರ್ಷಗಳಷ್ಟು ಹಳೆಯದಾದ ಬಂಡೆಯಿಂದ ಕೆತ್ತಲಾಗಿದೆ. ಮೈಸೂರಿನ ಎಚ್ಡಿ ಕೋಟೆ ತಾಲೂಕಿನ ಜಯಪುರ ಹೋಬಳಿಯ ಗುಜ್ಜೇಗೌಡನಪುರದಿಂದ ಕೃಷ್ಣ ಶಿಲೆಯನ್ನು (ಕಪ್ಪು ಶಿಲೆ) ಉತ್ಖನನ ಮಾಡಲಾಗಿತ್ತು. ರಾಮದಾಸ್ (78) ಎಂಬುವವರ ಕೃಷಿ ಭೂಮಿಯನ್ನು ಸಮತಟ್ಟು ಮಾಡುವ ವೇಳೆ ಕೃಷ್ಣ ಶಿಲೆ ಪತ್ತೆಯಾಗಿದ್ದು, ಕಲ್ಲಿನ ಗುಣಮಟ್ಟವನ್ನು ಪರಿಶೀಲಿಸಿದ ಸ್ಥಳೀಯ ಗುತ್ತಿಗೆದಾರರೊಬ್ಬರು ತಮ್ಮ ಸಂಪರ್ಕಗಳ ಮೂಲಕ ಅಯೋಧ್ಯೆಯಲ್ಲಿರುವ ದೇವಸ್ಥಾನದ ಟ್ರಸ್ಟಿಗಳ ಗಮನ ಸೆಳೆದಿದ್ದರು.