ರಾಯಪುರ (ಛತ್ತೀಸ್‌ಗಡ):
ಗಾಯಗೊಂಡು ರಕ್ತ ಸುರಿಸುತ್ತಿದ್ದ ಅಲಿಯವರನ್ನು ಗುಂಪು ಪೋಲಿಸ್ ಠಾಣೆಯೊಳಗೆ ಕರೆದೊಯ್ಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆದರೆ ಅಲಿಯವರಿಗೆ ರಕ್ಷಣೆ ನೀಡುವ ಬದಲು ಪೋಲಿಸರು ಅವರನ್ನೇ ಬಂಧಿಸಿದ್ದಾರೆ ಎಂದು thequint.com ವರದಿ ಮಾಡಿದೆ
ಅಲಿ ಮತ್ತು ಮಸೀದಿ ಸಮಿತಿಯ ಸದಸ್ಯರಾದ ತಾಹಿರ್ ಖಾನ್ ಹಾಗೂ ಇಬ್ರಾಹಿಂ ಖಾನ್ ವಿರುದ್ಧ ಪೋಲಿಸ್ ದೂರು ದಾಖಲಾಗಿದ್ದು, ಎಲ್ಲ ಮೂವರನ್ನು ಪೋಲಿಸರು ಬಂಧಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೊಂಡ ಮರುದಿನ, ಅಂದರೆ ಜ.23ರಂದು ಅಲಿಯವರ ಮದರಸದ ಮಾಜಿ ವಿದ್ಯಾರ್ಥಿಯಾದ ಗ್ರಾಮದ 14ರ ಹರೆಯದ ಬಾಲಕನೋರ್ವ ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕಿದ್ದ. 1992ರಲ್ಲಿ ಧ್ವಂಸಗೊಂಡಿದ್ದ ಬಾಬ್ರಿ ಮಸೀದಿಯ ಚಿತ್ರವನ್ನು ಹಾಕಿದ್ದ ಬಾಲಕ, ‘ಸಹನೆಯಿಂದಿರಿ,ನಮ್ಮ ಸಮಯ ಬಂದಾಗ ಶರೀರಗಳಿಂದ ತಲೆಗಳು ಉರುಳುತ್ತವೆ’ಎಂದು ಬರೆದಿದ್ದ.
ಬಾಲಕನ ಪೋಸ್ಟ್‌ನ ಸ್ಕ್ರೀನ್‌ಶಾಟ್‌ಗಳು ಗ್ರಾಮದ ಜನರ ನಡುವೆ ಹರಿದಾಡಿದ್ದವು.
ಕೆಲವು ವರ್ಷಗಳಿಂದ ಹೊರಗಿನ ಕೆಲವು ಮುಸ್ಲಿಮ್ ವ್ಯಕ್ತಿಗಳು ಸಿನೋಧಾ ಗ್ರಾಮದಲ್ಲಿ ವಾಸವಾಗಿದ್ದಾರೆ. ಅವರು ಹಿಂದು ಸಮಾಜದ ವಿರುದ್ಧ ಜನರನ್ನು ಪ್ರಚೋದಿಸುತ್ತಿದ್ದಾರೆ ಮತ್ತು ಹಿಂದುಗಳ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ ಎಂದು ಅಲಿ ಮತ್ತಿತರರ ವಿರುದ್ಧ ದಾಖಲಾದ ದೂರಿನಲ್ಲಿ ಹೇಳಲಾಗಿತ್ತು. ಅಲಿ ಮತ್ತು ಇತರ ಮೂವರ ವಿರುದ್ಧ ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುತ್ತಿರುವ ಮತ್ತು ದಂಗೆಗಳಿಗೆ ಪ್ರಚೋದಿಸುತ್ತಿರುವ ಆರೋಪಗಳನ್ನು ಹೊರಿಸಲಾಗಿತ್ತು. ಬಾಲಕನ ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಈ ವ್ಯಕ್ತಿಗಳ ಬೋಧನೆಯೇ ಕಾರಣ ಎಂದೂ ಆರೊಪಿಸಲಾಗಿತ್ತು.
ಅಲಿ ಮೂಲತಃ ಜಾರ್ಖಂಡ್ ನಿವಾಸಿಯಾಗಿದ್ದು, ನಾಲ್ಕು ವರ್ಷಗಳಿಂದ ಹಿಂದೆ ಸಿನೋಧಾ ಮಸೀದಿ ಮತ್ತು ಮದರಸದಲ್ಲಿ ಇಮಾಮ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕಿದ್ದ ಬಾಲಕನನ್ನೂ ಬಂಧಿಸಲಾಗಿದ್ದು, ಬಾಲಾಪರಾಧಿಗಳ ಜೈಲಿಗೆ ತಳ್ಳಲಾಗಿದೆ. ಬಂಧಿತರೆಲ್ಲ ಆರು ದಿನಗಳ ಜೈಲು ವಾಸದ ಬಳಿಕ ಜ.30ರಂದು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ.
‘ಒಂದೂವರೆ ವರ್ಷದಿಂದ ಆ ಬಾಲಕ ಮದರಸಕ್ಕೆ ಬರುತ್ತಿಲ್ಲ. ಇತ್ತೀಚಿಗೆ ನಾನು ಆತನೊಂದಿಗೆ ಮಾತನಾಡಿದ್ದೂ ಇಲ್ಲ. ಹೇಗಿದ್ದರೂ,ಇತರ ಯಾರೋ ಮಾಡುವ ಪೋಸ್ಟ್ ಮೇಲೆ ನನಗೆ ಯಾವ ನಿಯಂತ್ರಣವೂ ಇಲ್ಲ. ಆದಾಗ್ಯೂ ನಾನು ತಪ್ಪು ಮಾಡಿದ್ದೇನೆ ಎಂದು ಯಾರಾದರೂ ಭಾವಿಸಿದರೆ ಪೋಲಿಸರು ತಮ್ಮ ಕೆಲಸವನ್ನು ಮಾಡಲು ಬಿಡಿ, ನನ್ನನ್ನೇಕೆ ಥಳಿಸುವುದು? ಇದು ಅನ್ಯಾಯ’ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅಲಿ ಹೇಳಿದರು.
ಬಂಧಿತ ಇತರ ಇಬ್ಬರೂ ವಾಟ್ಸ್‌ಆ್ಯಪ್ ಸ್ಟೇಟಸ್‌ಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಅಲಿಯನ್ನು ಥಳಿಸಿದ್ದಕ್ಕಾಗಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೋಲಿಸರು ಪ್ರತ್ಯೇಕ ದೂರನ್ನು ದಾಖಲಿಸಿಕೊಂಡಿದ್ದಾರೆ. ಗುಂಪು ಅಲಿಯನ್ನು ಪೋಲಿಸ್ ಠಾಣೆಗೆ ತರುತ್ತಿರುವ ವೀಡಿಯೊ ವೈರಲ್ ಆಗಿದ್ದರೂ ಪ್ರಕರಣದಲ್ಲಿ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ.
ಅಲಿಯವರನ್ನು ಥಳಿಸಿದ್ದ ಯಾರನ್ನೂ ಗುರುತಿಸಲು ಇನ್ನೂ ಸಾಧ್ಯವಾಗಿಲ್ಲ, ತನಿಖೆ ನಡೆಸುತ್ತಿದ್ದೇವೆ ಎಂದು ಪೋಲಿಸರು ಸಮಜಾಯಿಷಿ ನೀಡಿದ್ದಾರೆ. ಗುಂಪಿನಲ್ಲಿದ್ದ ಕೆಲವರು ಸ್ಥಳೀಯರಾಗಿದ್ದು,ಅವರನ್ನು ತಾನು ಗುರುತಿಸಬಲ್ಲೆ ಎಂದು ಅಲಿ ತಿಳಿಸಿದ್ದರೂ ಪೋಲಿಸರು ಅದನ್ನು ಕಿವಿಗೆ ಹಾಕಿಕೊಂಡಿಲ್ಲ ಎಂದು ಆರೋಪಿಸಲಾಗಿದೆ.