ಹಿಂದೂ ಧರ್ಮದ ಜನರೇ ಬಹುಸಂಖ್ಯಾತರಾಗಿದ್ದ ಲಕ್ಷದ್ವೀಪ ಮುಸ್ಲಿಮರೇ ಬಹುಸಂಖ್ಯಾತರಾಗಿ (98%) ಬದಲಾಗಿದ್ದು ಹೇಗೆ ಗೊತ್ತಾ?

in Uncategorized 16,845 views

ಕ್ರಿಸ್ತಪೂರ್ವ 1500ರಷ್ಟು ವರ್ಷಗಳ ಹಿಂದೆಯೇ ಲಕ್ಷದ್ವೀಪದಲ್ಲಿ ಮಾನವ ವಾಸವಾಗಿದ್ದ ಎಂಬುದಕ್ಕೆ ಪುರಾವೆಗಳಿವೆ. 7 ಶತಮಾನದಲ್ಲಿ ಮುಸ್ಲಿಂ ಮಿಷನರಿಗಳು ಇದ್ದ ಬಗ್ಗೆ ಗುರುತುಗಳಿವೆ. ಅದಕ್ಕೂ ಮುನ್ನ ಹಿಂದೂ ಮತ್ತು ಬೌದ್ಧ ಧರ್ಮ ಉತ್ತುಂಗದಲ್ಲಿತ್ತು. ಈ ಧರ್ಮಗಳು ಅಸ್ತಿತ್ವ ಕಳೆದುಕೊಳ್ಳಲು ಕಾರಣ ಏನು ಇಲ್ಲಿದೆ ವಿವರಣೆ.

Advertisement

ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ ಬಹಳ ಟ್ರೆಂಡಿಂಗ್‌ ನಲ್ಲಿರುವ ಹೆಸರು ಲಕ್ಷದ್ವೀಪ. ಇದೊಂದು ಪ್ರವಾಸಿ ತಾಣ ಜೊತೆಗೆ ಭಾರತದ ಕೇಂದ್ರಾಡಳಿತ ಪ್ರದೇಶ. ಲಕ್ಷದ್ವೀಪವನ್ನು ಹಿಂದೆ ಲಖದೀವ್‌, ಮಿನಿಕೋಯ್‌ ಮತ್ತು ಅಮಿನ್‌ ದಿವಿ ದ್ವೀಪಗಳು ಎಂದು ಕರೆಯಲಾಗುತ್ತಿತ್ತು, ಇದು ಭಾರತದ ನೈಋತ್ಯ ಕರಾವಳಿ ಭಾಗವಾದ ಕೇರಳದ ಅರಬ್ಬೀ ಸಮುದ್ರದಲ್ಲಿ 200 ರಿಂದ 400 ಕಿಲೋ ದೂರದಲ್ಲಿದೆ. 1973ರಲ್ಲಿ ಈ ದ್ವೀಪ ಸಮೂಹಕ್ಕೆ ಲಕ್ಷದ್ವೀಪ ಎಂದು ಹೆಸರಿಡಲಾಗಿತ್ತು. ಇಲ್ಲಿ ಮೂವತ್ತಾರು ಮಧ್ಯಮ ಗಾತ್ರದ ದ್ವೀಪಗಳಿದ್ದು ಇದರಲ್ಲಿ ಕೇವಲ 10 ದ್ವೀಪಗಳು ಮಾತ್ರ ಮಾನವ ವಾಸಕ್ಕೆ ಯೋಗ್ಯವಾಗಿದೆ. ಅಮಿನಿ, ಕಲ್ಪೇನಿ ಆಂಡ್ರೊಟ್, ಕವರಟ್ಟಿ ಮತ್ತು ಅಗತ್ತಿ ಇಲ್ಲಿನ ಅತ್ಯಂತ ಹಳೆಯ ಜನವಸತಿ ದ್ವೀಪಗಳಾಗಿವೆ.

ಕ್ರಿಸ್ತಪೂರ್ವ 1500ರಷ್ಟು ವರ್ಷಗಳ ಹಿಂದೆಯೇ ಲಕ್ಷದ್ವೀಪದಲ್ಲಿ ಮಾನವ ವಾಸವಾಗಿದ್ದ ಎಂಬುದಕ್ಕೆ ಪುರಾವೆಗಳಿವೆ. ಏಳನೇ ಶತಮಾನದಲ್ಲಿ ಮುಸ್ಲಿಂ ಮಿಷನರಿಗಳು ಲಕ್ಷದ್ವೀಪದಲ್ಲಿ ಇದ್ದ ಬಗ್ಗೆ ಗುರುತುಗಳಿವೆ. ಈ ದ್ವೀಪ ಕ್ರಿಸ್ತ ಶಕ 1799 ರವೆಗೆ ಟಿಪ್ಪು ಸುಲ್ತಾನನ ಆಡಳಿತಕ್ಕೆ ಒಳಪಟ್ಟಿತ್ತು. ಅದಾದ ಬಳಿಕ ಬ್ರಿಟೀಷರು ಇಲ್ಲಿ ಅಧಿಪತ್ಯ ಸ್ಥಾಪಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ 1956ರಲ್ಲಿ ಕೇಂದ್ರಾಡಳಿತ ಪ್ರದೇಶವಾಯ್ತು.

ಲಕ್ಷದ್ವೀಪದ ಪ್ರಸ್ತುತ ಆಡಳಿತ ರಾಜಧಾನಿ ಕವರಟ್ಟಿ. ಇದು ಕೇರಳ ಹೈಕೋರ್ಟ್‌ ಪರಿಧಿಯಲ್ಲಿ ಬರುತ್ತದೆ. 2011ರ ಜನಗಣತಿ ಪ್ರಕಾರ ಲಕ್ಷದ್ವೀಪದಲ್ಲಿ 64,429 ಜನಸಂಖ್ಯೆ ಇದ್ದು, ಶೇಕಡ 96ಕ್ಕೂ ಹೆಚ್ಚು ಮಂದಿ ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದಾರೆ. ಇವರು ಮಲಯಾಳಂ ಭಾಷೆಯಲ್ಲಿ ವ್ಯವಹರಿಸುತ್ತಾರೆ. ಲಕ್ಷದ್ವೀಪವು ಮೊದಲು ಮುಸ್ಲಿಂ ಪ್ರಾಬಲ್ಯ ಹೊಂದಿರಲಿಲ್ಲ. ಇಲ್ಲಿನ ಜನ ಮೊದಲು ಹಿಂದೂ ಮತ್ತು ಬೌದ್ಧ ಧರ್ಮಗಳನ್ನು ಅನುಸರಿಸುತ್ತಿದ್ದರು.

ಇಲ್ಲಿಯ ಧರ್ಮದ ಬಗ್ಗೆ ಅನೇಕ ಕಥೆಗಳು ಕೂಡ ಇದೆ. ಚೇರ ಸಾಮ್ರಾಜ್ಯದ ಕೊನೆಯ ಅರಸು ಚೇರಮನ್‌ ಪೆರುಮಾಳ್‌ ಕಾಲದಲ್ಲಿ ಇಲ್ಲಿ ಕೇರಳ ಮತ್ತು ಮಂಗಳೂರು ಕರಾವಳಿಯಿಂದ ವಲಸೆ ಬಂದು ನೆಲಸಿದ್ದ ಜನರಿದ್ದರು. ಕ್ರಿಸ್ತ ಶಕ 5-6ನೇ ಶತಮಾನದಲ್ಲಿ ಬೌದ್ಧ ಧರ್ಮ ಉಚ್ಚ್ರಾಯ ಸ್ಥಿತಿಯಲ್ಲಿತ್ತು. ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕ್ರಿ.ಶ.661ರಲ್ಲಿ ಅರಬ್ ಸೂಫಿ ಉಬೈದುಲ್ಲಾ ಎಂಬಾತ ಇಲ್ಲಿಗೆ ಭೇಟಿ ನೀಡಿದ್ದ. ಆಗ ಅಲ್ಲಿ ಇಸ್ಲಾಂ ಧರ್ಮವನ್ನು ಪರಿಚಯಿಸಿದ. ಉಬೈದುಲ್ಲಾ ಸಮಾಧಿ ಆಂಡ್ರೊಟ್ ದ್ವೀಪದಲ್ಲಿ ಇಂದಿಗೂ ಇದೆ. ಸುಮಾರು 7ನೇ ಶತಮಾನದಲ್ಲಿ ದ್ವೀಪದಲ್ಲಿ ಇಸ್ಲಾಂ ಧರ್ಮ ಅಸ್ತಿತ್ವ ಪಡೆಯಿತು.

ಅರಬ್ಬರ ವ್ಯಾಪರ ಕೌಶಲ್ಯಕ್ಕೆ ಮಾರು ಹೋದ ಚೇರ ದೊರೆ ಚೇರಮನ್‌ ಪೆರುಮಾಳ್‌ ಕ್ರಿ.ಶ 825ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ. ನಂತರ ರಾಜನ ಅನುಯಾಯಿಗಳು ಸೇರಿ ಬಹುತೇಕರು ಇಸ್ಲಾಂಗೆ ಮತಾಂತರಗೊಂಡ ಪರಿಣಾಮ ಬೌದ್ಧರು ಮತ್ತು ಹಿಂದೂಗಳ ಪ್ರಾಬಲ್ಯ ಕುಂಠಿತವಾಯ್ತು ಎಂದು ಐತಿಹಾಸಿಕ ದಾಖಲೆಗಳಿವೆ. ಇದು ಕೇರಳದಲ್ಲೂ ಇಸ್ಲಾಂ ಧರ್ಮ ಬೆಳವಣಿಗೆಗೆ ನಾಂದಿ ಹಾಡಿತು.

11 ನೇ ಶತಮಾನದ ಅವಧಿಯಲ್ಲಿ, ಈ ದ್ವೀಪಸಮೂಹವನ್ನು ಕೊನೆಯ ಚೋಳ ರಾಜರು ಮತ್ತು ನಂತರ ಕನ್ನನೋರ್ ರಾಜರು ಆಳಿದರು. ನಂತರ ಪೋರ್ಚುಗೀಸರು ಆಳಿದರು. 16 ನೇ ಶತಮಾನದ ನಂತರ ಚಿರಕ್ಕಲ್ ಹಿಂದೂ ದೊರೆಗಳು ಬಳಿಕ ಅರಕ್ಕಲ್ ಮುಸ್ಲಿಮರು, 17ನೇ ಶತಮಾನದಲ್ಲಿ ಕಣ್ಣೂರಿನ “ಅಲಿ ರಜಾ ಅರಕ್ಕಲ್‌ ಭೀವಿಗೆ” ಈ ಲಕ್ಷದ್ವೀಪಗಳು ಕೊಳತ್ತಿರಿ ರಾಜರಿಂದ ಕಾಣಿಕೆಯಾಗಿ ಸಿಕ್ಕಿತ್ತು. ನಂತರ 1787ರಲ್ಲಿ ಅವಿನ್‌ ದೀವಿ ದ್ವೀಪಗಳು ಟಿಪ್ಪು ಸುಲ್ತಾನ್ ಆಡಳಿತಕ್ಕೆ ಬಂತು. ಮತ್ತು ನಂತರ ಬ್ರಿಟಿಷರು ಲಕ್ಷದ್ವೀಪದಲ್ಲಿ ಆಳ್ವಿಕೆ ನಡೆಸಿದರು. ಬಳಿಕ ಮದ್ರಾಸ್‌ ಪ್ರೆಸಿಡೆನ್ಸಿಯ ಮಲಬಾರ್‌ ಜಿಲ್ಲೆಗೆ ಸೇರಿಸಿದ್ದರು. ಈಗ ಭಾರತದ ರಾಷ್ಟ್ರಪತಿಗಳು ನೇಮಿಸಿದ ನಿರ್ವಾಹಕರು ಲಕ್ಷದ್ವೀಪದಲ್ಲಿ ಆಡಳಿತವನ್ನು ನಡೆಸುತ್ತಾರೆ.

ಇಲ್ಲಿನ ದ್ವೀಪ ವಾಸಿಗಳು ಬಹಳ ಸ್ನೇಹಜೀವಿಗಳಾಗಿದ್ದು, ತಮ್ಮ ಭೂಮಿಯನ್ನು ಮೈನ್‌ಲ್ಯಾಂಡ್‌ ಎಂದು ಅಪಾರವಾಗಿ ಪ್ರೀತಿಸುತ್ತಾರೆ. ಭಾರತದ ಇತರ ರಾಜ್ಯಗಳಿಂದ ಇಲ್ಲಿಗೆ ಬರುವ ಮೊದಲು ಪ್ರವಾಸಿಗರು ಕಡ್ಡಾಯವಾಗಿ ಲಕ್ಷದ್ವೀಪ ಪ್ರವಾಸೋದ್ಯಮದಿಂದ ಅನುಮತಿ ತೆಗೆದುಕೊಳ್ಳಬೇಕು. ಇದು ಕೊಚ್ಚಿಯಲ್ಲಿದೆ. ಇದಕ್ಕೂ ಮುನ್ನ ನಿಮ್ಮ ಪ್ರವೇಶದ ಅನುಮತಿಯನ್ನು ಪಡೆಯಲು ನೀವು ಮೊದಲು ನಿಮ್ಮ ಸ್ಥಳೀಯ ಪೊಲೀಸ್ ಠಾಣೆಯಿಂದ ಕ್ಲಿಯರೆನ್ಸ್ ಪ್ರಮಾಣಪತ್ರ (ಆನ್‌ಲೈನ್‌ನಲ್ಲಿ ಲಭ್ಯವಿದೆ) ಪಡೆಯುವುದು ಬಹಳ ಅಗತ್ಯ. ಲಕ್ಷದ್ವೀಪದ ಹಲವು ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕವು ಸೀಮಿತವಾಗಿರುವ ಕಾರಣ ಇಲ್ಲಿಯ ಪ್ರಯಾಣಕ್ಕಾಗಿ ಹಣವನ್ನು ತರುವುದು ಕೂಡ ಉತ್ತಮ.

ಲಕ್ಷದ್ವೀಪಕ್ಕೆ ಹೋಗಬೇಕೆಂದಿದ್ದರೆ ಕೇರಳದ ಮೂಲಕ ತಲುಪಬಹುದು. ಕೇರಳದ ಕೊಚ್ಚಿಯಿಂದ ಲಕ್ಷದ್ವೀಪಕ್ಕೆ ವಿಮಾನಗಳು ಮತ್ತು ಹಡಗುಗಳು ಲಭ್ಯವಿದೆ. ವಾರದ ಆರು ದಿನಗಳಲ್ಲಿ ಏರ್‌ ಇಂಡಿಯಾದ ವಿಮಾನಗಳು ಲಕ್ಷದ್ವೀಪ ಪ್ರಯಾಣದ ಸೇವೆಯನ್ನು ಒದಗಿಸುತ್ತವೆ. ಇನ್ನು ಹಡಗಿನ ಮೂಲಕ ಹೋಗುವುದಾದರೆ ಕೊಚ್ಚಿ ಮತ್ತು ಲಕ್ಷದ್ವೀಪ ನಡುವೆ ಕಾರ್ಯ ನಿರ್ವಹಿಸುವ ಏಳು ಪ್ರಯಾಣಿಕ ಹಡಗುಗಳಿವೆ. ನೀವು ತಲುಪಬೇಕಾದ ಸ್ಥಳಕ್ಕೆ ಅನುಗುಣವಾಗಿ ಈ ಪ್ರಯಾಣಕ್ಕೆ ಸುಮಾರು 14ರಿಂದ 18 ಗಂಟೆಗಳ ಬೇಕಾಗುತ್ತದೆ. ಅಕ್ಟೋಬರ್ ನಿಂದ ಮೇ ತಿಂಗಳ ನಡುವಣ ಅವಧಿ ಲಕ್ಷದ್ವೀಪಕ್ಕೆ ಭೇಟಿ ನೀಡಲು ಸುಸಮಯವಾಗಿದೆ.

Advertisement
Share this on...